ಬಾಗಲಕೋಟೆ: ಯಾವುದೇ ಕಾರಣಕ್ಕೂ ಸಾರಿಗೆ ಸಿಬ್ಬಂದಿ ವೇತನ ತಡೆ ಹಿಡಿಯಲ್ಲ. ಸಂಬಳ ಕಟ್ ಮಾಡಲ್ಲ. ಪೂರ್ಣ ಸಂಬಳ ಕೊಡುತ್ತೇವೆ ಎಂದು ಸಾರಿಗೆ ಸಚಿವ ಲಕ್ಷ್ಮಣ್ ಸವದಿ ಭರವಸೆ ನೀಡಿದ್ದಾರೆ.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೊರೊನಾದಿಂದಾಗಿ ಸಾರಿಗೆ ಸಂಸ್ಥೆಗೆ ಬಹಳ ಹಾನಿಯಾಗಿದೆ. ಎರಡು ತಿಂಗಳು ಸಾರಿಗೆ ಸಿಬ್ಬಂದಿಗೆ ಸರ್ಕಾರ ಸಂಬಳ ಕೊಟ್ಟಿದೆ. ಸಿಬ್ಬಂದಿ ಸಂಬಳಕ್ಕಾಗಿ ರಾಜ್ಯ ಸರ್ಕಾರ 651 ಕೋಟಿ ರೂ. ಕೊಟ್ಟಿದೆ. ಮುಂದಿನ ತಿಂಗಳು ಸಂಬಳ ಕೊಡಲು ಕಷ್ಟಸಾಧ್ಯವಾಗಬಹುದು. ಇಲಾಖೆ ಸಿಬ್ಬಂದಿಗೆ ಸಂಬಳ ಕೊಡಲು ಹಣ ನೀಡುವಂತೆ ಸಿಎಂ ಜೊತೆ ಚರ್ಚೆ ಮಾಡುವೆ ಎಂದು ತಿಳಿಸಿದ್ದಾರೆ.
ಅಲ್ಲದೆ ಯಾವುದೇ ಕಾರಣಕ್ಕೂ ಸಾರಿಗೆ ಸಿಬ್ಬಂದಿ ವೇತನ ತಡೆ ಹಿಡಿಯಲ್ಲ. ಸಂಬಳ ಕಟ್ ಮಾಡಲ್ಲ. ಪೂರ್ಣ ಸಂಬಳ ಕೊಡುತ್ತೇವೆ. ಕೊರೊನಾ ಭಯದಿಂದ ಸೇವೆಗೆ ಹಾಜರಾಗದೇ ಇರುವವರು ಕೂಡಲೇ ಹಾಜರಾಗಿ. ಕೊರೊನಾ ವಿರುದ್ಧದ ಹೋರಾಟದಲ್ಲಿ ಭಾಗಿಯಾಗಿ. ಇಲಾಖೆ ಸುರಕ್ಷತೆಗಾಗಿ ನೀಡಿರುವ ಸೌಲಭ್ಯ ಬಳಕೆ ಮಾಡಿಕೊಳ್ಳಿ. ಒಂದು ವೇಳೆ ಕೊರೋನಾಕ್ಕೆ ನಮ್ಮ ಇಲಾಖೆ ಸಿಬ್ಬಂದಿ ಬಲಿಯಾದ್ರೆ, ಆ ಕುಟುಂಬಕ್ಕೆ 30 ಲಕ್ಷ ಪರಿಹಾರ ನೀಡುತ್ತೇವೆ ಎಂದು ಭರವಸೆ ನೀಡಿದ್ದಾರೆ.
ಎರಡು ದಿನಗಳಲ್ಲಿ ಅಂತಾರಾಜ್ಯ ಪ್ರಯಾಣ ಆರಂಭವಾಗುತ್ತದೆ. ರಾಜ್ಯದ ಸುತ್ತಮುತ್ತ ರಾಜ್ಯಗಳಿಗೆ ಪತ್ರ ಬರೆದಿದ್ದೇನೆ. ಸದ್ಯಕ್ಕೆ ಮಹಾರಾಷ್ಟ್ರಕ್ಕೆ ಬಸ್ ಸಂಚಾರ ಇಲ್ಲ. ಪತ್ರವನ್ನು ಕೂಡ ಬರೆದಿಲ್ಲ. ಈಗಾಗಲೇ ಆಂಧ್ರ ಪ್ರದೇಶದಿಂದ ಒಪ್ಪಿಗೆ ಸಿಕ್ಕಿದೆ. ರಾಜ್ಯದಿಂದ ಮಂತ್ರಾಲಯ, ತಿರುಪತಿ, ಶ್ರೀಶೈಲಕ್ಕೆ ಬಸ್ ಆರಂಭ ಆಗಲಿವೆ. ಬೇರೆ ರಾಜ್ಯಗಳು ಒಪ್ಪಿಗೆ ನೀಡಿದ ಮೇಲೆ ಅಲ್ಲೂ ಸಂಚಾರ ಆರಂಭ. ಹಸಿರು ವಲಯದ ಹೊರ ರಾಜ್ಯಗಳಿಗೆ ರಾಜ್ಯದಿಂದ ಬಸ್ ಸಂಚಾರ ಆರಂಭವಾಗಲಿದೆ ಎಂದು ತಿಳಿಸಿದರು.
ಇದೇ ವೇಳೆ ಚೀನಾ-ಭಾರತ ಸಂಘರ್ಷದ ಬಗ್ಗೆ ರಾಹುಲ್ ಗಾಂಧಿ ಟ್ವೀಟ್ ವಿಚಾರವಾಗಿ ಪ್ರತಿಕ್ರಿಯಿಸಿ, ರಾಹುಲ್ ಗಾಂಧಿ ಪ್ರಶ್ನೆಗೆ ಉತ್ತರ ಕೊಟ್ಟರೆ ನಾವು ರಾಹುಲ್ ಗಾಂಧಿ ಆಗಬೇಕಾಗುತ್ತೆ. ಯಾರಾದ್ರೂ ಬುದ್ಧಿವಂತರ ಪ್ರಶ್ನೆ ಇದ್ದರೆ ಉತ್ತರ ಕೊಡ್ತೇನೆ ಎಂದು ಹೇಳುವ ಮೂಲಕ ಪರೋಕ್ಷವಾಗಿ ರಾಹುಲ್ ಗಾಂಧಿಗೆ ಬುದ್ದಿ ಇಲ್ಲ ಎಂದ ಅವರು, ನಮ್ಮ ದೇಶ ಬಲಾಢ್ಯವಾಗಿದೆ. ಚೀನಾ ಪುಕ್ಕಲು ದೇಶ. ಅದಕ್ಕೆ ಹೆದರಲ್ಲ. ಚೀನಾ ಎದುರಿಸುವ ಶಕ್ತಿ ನಮ್ಮ ಸೈನಿಕರಿಗೆ ಇದೆ.