ಬೆಂಗಳೂರು: ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಕಂಬಳಿ ಹಾಕಿಕೊಂಡು ಚುನಾವಣೆ ಪ್ರಚಾರ ಮಾಡಿರುವ ವಿಚಾರ ರಾಜ್ಯ ರಾಜಕಾರಣದಲ್ಲಿ ಸಾಕಷ್ಟು ಚರ್ಚೆ ಆಗ್ತಿದೆ. ಮೊನ್ನೆಯಷ್ಟೇ ಕಿಡಿಕಾರಿದ್ದ ವಿಪಕ್ಷ ನಾಯಕ ಸಿದ್ದರಾಮಯ್ಯ, ಕಂಬಳಿ ಹಾಕಿಕೊಂಡ ತಕ್ಷಣ ಆ ಗೌರವ ಬರುತ್ತಾ..? ಎಂದು ಕಿಡಿಕಾರಿದ್ದರು.
ಇದಕ್ಕೆ ತಿರುಗೇಟು ನೀಡಿದ್ದ ಸಿಎಂ ಬೊಮ್ಮಾಯಿ.. ಉಣ್ಣೆಯನ್ನು ನೇಯ್ದು ಕಂಬಳಿ ಮಾಡಲಾಗುತ್ತದೆ. ಇದರ ಹಿಂದೆ ಹಾಲುಮತದವರ ಗೌರವ ಮತ್ತು ಪರಿಶ್ರಮ ಅಡಗಿದೆ. ಕಂಬಳಿ ಹೊದ್ದುಕೊಳ್ಳಲು ಯೋಗ್ಯತೆ ಇರಬೇಕು ಎಂದು ತಿರುಗೇಟು ನೀಡಿದ್ದರು.
ಇದೇ ವಿಚಾರಕ್ಕೆ ಸಚಿವ ಎಂಟಿಬಿ ನಾಗರಾಜ್ ಪ್ರತಿಕ್ರಿಯಿಸಿದ್ದು, ಪ್ರೀತಿಯಿಂದ ಕಂಬಳಿ ಹಾಕಿದ್ರೆ ತಪ್ಪೇನು? ಉಪಚುನಾವಣೆಯಲ್ಲಿ ಕಂಬಳಿ ವಿಚಾರ ದೊಡ್ಡ ಪ್ರಚಾರ ಆಗ್ತಿದೆ. ಕಂಬಳಿಯನ್ನ ಕನಕದಾಸರ ಭಕ್ತರು, ಅನುಯಾಯಿಗಳು ಬಳಸುತ್ತಿದ್ರು, ಹಿಂದಿನ ಕಾಲದಲ್ಲಿ ಕುರಿ ಉಣ್ಣೆಯಿಂದ ತಯಾರದ ಕಂಬಳಿ ಎಲ್ಲರು ಬಳಸುತ್ತಿದ್ರು.. ನಮ್ಮ ಸಮುದಾಯದವರು ಸಿಎಂಗೆ ಪ್ರೀತಿಯಿಂದ ಕಂಬಳಿಯನ್ನು ಮೈಮೇಲೆ ಹಾಕಿದ್ದಾರೆ, ಅದನ್ನು ತಪ್ಪೆಂದು ಭಾವಿಸಬಾರದು, ಸಾಮಾನ್ಯವಾಗಿ ಎಲ್ಲಾ ಸಮುದಾಯದವರು ಕುರಿ ಮೇಯಿಸುತ್ತಾರೆ, ರೈತಾಪಿ ಜನರೆಲ್ಲ ಕುರಿ, ಹಸು ಮೇಕೆ ಮೇಯಿಸುತ್ತಾರೆ ಹಾಗಂತ ಅದಕ್ಕೆ ಬೇರೆ-ಬೇರೆ ಅರ್ಥ ಕಲ್ಪಿಸುವ ಅಗತ್ಯವಿಲ್ಲ ಎಂದು ಸಿದ್ದರಾಮಯ್ಯರ ವಿರುದ್ಧ ಕಿಡಿಕಾರಿದ್ದಾರೆ.