ಬೆಳಗಾವಿ:ವಿದ್ಯಾರ್ಥಿಗಳ ಉಜ್ವಲ ಬದುಕು ಮತ್ತು ಭವಿಷ್ಯವನ್ನು ರೂಪಿಸುವ ಎಸ್ಸೆಸ್ಸೆಲ್ಸಿ ಎಂಬ ಪ್ರಮುಖ ಘಟ್ಟ ದಾಟಬೇಕಾದರೆ ಪರಿಶ್ರಮದಿಂದ ಓದಿ ಜ್ಞಾನ ಮಟ್ಟ ಹೆಚ್ಚಿಸಿಕೊಳ್ಳಬೇಕು ಎಂದು ಮಾಳಮಾರುತಿ ಠಾಣೆ ಇನ್ಸಪೆಕ್ಟರ್ ಸುನೀಲ ಪಾಟೀಲ ಅಭಿಪ್ರಾಯಪಟ್ಟರು.
ನಗರದ ವಂಟಮೂರಿ ಕಾಲೋನಿ ಸರ್ಕಾರಿ ಪ್ರೌಢಶಾಲೆಯ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳಿಗೆ ಮಂಗಳವಾರ ಉದಯವಾಣಿ ಶಿಕ್ಷಣ ಮಾರ್ಗದರ್ಶಿ ವಿತರಿಸಿ ಅವರು ಮಾತನಾಡಿದರು.
ನಿಮ್ಮ ಜೀವನದಲ್ಲಿ ಎಸ್ಸೆಸ್ಸೆಲ್ಸಿ ಎಂಬ ತಳಪಾಯವನ್ನು ಗಟ್ಟಿಗೊಳಿಸಿಕೊಳ್ಳಬೇಕು. ಆಗ ಮುಂದಿನ ಎಲ್ಲ ಸ್ಪರ್ಧೆ, ಸವಾಲುಗಳನ್ನು ಸಮರ್ಥವಾಗಿ ಎದುರಿಸಿ ಯಶಸ್ಸು ಸಾಧಿಸಲು ಸಾಧ್ಯವಿದೆ. ಸರಿಯಾದ ಪಠ್ಯಕ್ರಮ ಇಟ್ಟುಕೊಂಡು ಸತತ ಪರಿಶ್ರಮದಿಂದ ಓದಿ ಜ್ಞಾನವನ್ನು ಹೆಚ್ಚಿಸಿಕೊಳ್ಳಬೇಕು. ನೀವು ಈಗ ಶ್ರಮಪಟ್ಟರೆ ಮುಂದಿನ ಭವಿಷ್ಯ ಉಜ್ವಲ ಆಗಿರುತ್ತದೆ ಎಂದರು.
ವಿದ್ಯಾರ್ಥಿ ಜೀವನದಲ್ಲಿ ಯಾವುದೇ ಕಾರಣಕ್ಕೂ ದುಶ್ಚಟಗಳಿಗೆ ಬಲಿ ಬೀಳಬಾರದು. ಕೆಟ್ಟ ಚಟುವಟಿಕೆಗಳಲ್ಲಿ ಭಾಗಿಯಾಗಬಾರದು. ಕೆಟ್ಟವರಾಗಲು ಕ್ಷಣ ಮಾತ್ರ ಸಾಕು. ಆದರೆ ಒಳ್ಳೆಯವರಾಗಲು ಅನೇಕ ವರ್ಷಗಳು ಬೇಕಾಗುತ್ತವೆ. ನಿಮ್ಮ ತಂದೆ, ತಾಯಿ, ಶಿಕ್ಷಕರು, ಶಾಲೆಯ ಹೆಸರನ್ನು ಉನ್ನತ ಮಟ್ಟಕ್ಕೆ ಏರಿಸಬೇಕು. ಸಮಾಜದಲ್ಲಿ ಉತ್ತಮ ವ್ಯಕ್ತಿತ್ವ ರೂಪಿಸಿಕೊಳ್ಳಬೇಕು ಎಂದರು.
ಉದಯವಾಣಿ ಶಿಕ್ಷಣ ಮಾರ್ಗದರ್ಶಿಯ ಸದುಪಯೋಗಪಡಿಸಿಕೊಳ್ಳಬೇಕು. ನಮ್ಮ ತಂದೆಯವರಾದ ದಿ| ಬಾಳಾಸಾಹೇಬ ಪಾಟೀಲ ಅವರ ಸ್ಮರಣಾರ್ಥ ಪ್ರಾಯೋಜಕತ್ವದಲ್ಲಿ ಪತ್ರಿಕೆಗಳು ನಿಮಗೆ ತಲುಪಲಿವೆ. ಇದರ ಸದುಪಯೋಗ ಆಗಬೇಕು ಎಂದರು. ಉದಯವಾಣಿ ಜಿಲ್ಲಾ ವರದಿಗಾರ ಭೆ„ರೋಬಾ ಕಾಂಬಳೆ ಮಾತನಾಡಿ, ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳ ಭವಿಷ್ಯ ರೂಪಿಸುವಲ್ಲಿ ಉದಯವಾಣಿ ಶಿಕ್ಷಣ ಮಾರ್ಗದರ್ಶಿ ಅನುಕೂಲಕರವಾಗಿದೆ.
ಶಿಕ್ಷಣ ಮಾರ್ಗದರ್ಶಿ ಜತೆಗೆ ಇತರೆ ಸುದ್ದಿಗಳನ್ನು ಓದಿ ಪ್ರಚಲಿತ ವಿದ್ಯಮಾನಗಳ ಜ್ಞಾನ ಹೆಚ್ಚಿಸಿಕೊಳ್ಳಬೇಕು. ಪರೀಕ್ಷೆಯಲ್ಲಿ ಉತ್ತಮ ಅಂಕ ಗಳಿಸಿ ಟಾಪರ್‌ಗಳಾಗಿ ಹೊರ ಹೊಮ್ಮಬೇಕು ಎಂದು ಕರೆ ನೀಡಿದರು.
ಪ್ರಭಾರಿ ಮುಖ್ಯೋಪಾಧ್ಯಾಯರಾದ ದೇವಮ್ಮ ನಾಯಕ ಅಧ್ಯಕ್ಷತೆ ವಹಿಸಿ ಮಾತನಾಡಿ, ವಿದ್ಯಾರ್ಥಿಗಳು ತರಗತಿಯಲ್ಲಿ ಕಲತಿದ್ದನ್ನು ಮನೆಯಲ್ಲಿ ಓದಿ, ಅರ್ಥೈಸಿಕೊಳ್ಳಬೇಕು. ಶಿಕ್ಷಣ ಮಾರ್ಗದರ್ಶಿಯ ಲಾಭ ಪಡೆದುಕೊಳ್ಳಬೇಕು ಎಂದರು. ಶಿಕ್ಷಕಿ ಸುಧಾ ಹೆಬ್ಬಳ್ಳಿ, ವೈ.ಬಿ. ಪೆಂಟಿ, ಅನುಸೂಯಾ ಹತ್ತಿಕಾಳ, ಪಿ.ಜಿ. ಖೋತ ಸೇರಿದಂತೆ ಇತರರು ಇದ್ದರು. ಶಿಕ್ಷಕ ಎ.ವೈ. ಅವತಾಳೆ ನಿರೂಪಿಸಿದರು. ಅಕ್ಕಮ್ಮ ಕುರಣಿ ವಂದಿಸಿದರು.