ಬೆಳಗಾವಿ: ‘ಇಲ್ಲಿನ ಕುಮಾರ ಗಂಧರ್ವ ರಂಗಮಂದಿರದಲ್ಲಿ ‘ಕೆ.ಎಸ್.ನರಸಿಂಹಸ್ವಾಮಿ ನೆನಪಿನ ವಸಂತೋತ್ಸವ’ ಪ್ರಯುಕ್ತ, ಮಾರ್ಚ್ 10, 11ರಂದು ಕೆ.ಎಸ್.ನರಸಿಂಹಸ್ವಾಮಿ ಅವರ ಗೀತೆಗಳ ಸಮೂಹ ಗಾಯನಕ್ಕೆ ಸಂಬಂಧಿಸಿ ಎರಡು ದಿನಗಳ ತರಬೇತಿ ಹಮ್ಮಿಕೊಳ್ಳಲಾಗಿದೆ’ ಎಂದು ಕೆ.ಎಸ್.ನರಸಿಂಹಸ್ವಾಮಿ ಟ್ರಸ್ಟ್ ಅಧ್ಯಕ್ಷ ಕಿಕ್ಕೇರಿ ಕೃಷ್ಣಮೂರ್ತಿ ಹೇಳಿದರು.
ಇಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ತರಬೇತಿಗಾಗಿ ಕೆಲವು ಸರ್ಕಾರಿ ಶಾಲೆ ಆಯ್ಕೆ ಮಾಡಿಕೊಳ್ಳಲಾಗಿದೆ. ಇದರೊಂದಿಗೆ ಸಂಗೊಳ್ಳಿ ರಾಯಣ್ಣ ಪ್ರಥಮ ದರ್ಜೆ ಘಟಕ ಮಹಾವಿದ್ಯಾಲಯ ಹಾಗೂ ಎಂಎನ್‌ಆರ್‌ಎಸ್ ಬಿಇಡಿ ಕಾಲೇಜು ವಿದ್ಯಾರ್ಥಿಗಳನ್ನು ಆಡಿಷನ್ ಮೂಲಕ ಆಯ್ಕೆ ಮಾಡಿ, 300 ಮಂದಿಗೆ ತರಬೇತಿ ಕೊಟ್ಟಿದ್ದೇವೆ’ ಎಂದರು.
‘ತರಬೇತಿಯಲ್ಲಿ ಭಾಗವಹಿಸಲು ಸಾರ್ವಜನಿಕರಿಗೂ ಅವಕಾಶವಿದೆ. ವಯಸ್ಸಿನ ಮಿತಿ ಇಲ್ಲ’ ಎಂದೂ ಸ್ಪಷ್ಟಪಡಿಸಿದರು.
’11ರಂದು ಸಂಜೆ 4ಕ್ಕೆ ನಡೆಯುವ ಕಾರ್ಯಕ್ರಮದಲ್ಲಿ, ತರಬೇತಿ ಪಡೆದವರು ಗಾಯನ ಪ್ರಸ್ತುತಪಡಿಸುವರು. ಇದರೊಂದಿಗೆ ಸ್ಥಳೀಯ ಕಲಾವಿದರು ಕೆ.ಎಸ್.ನರಸಿಂಹಸ್ವಾಮಿ ಅವರ ಗೀತೆಗಳಿಗೆ ಹೆಜ್ಜೆಹಾಕುವರು. ಹೆಸರಾಂತ ಗಾಯಕರು ವಿವಿಧ ಗೀತೆ ಹಾಡುವರು. ನರಸಿಂಹಸ್ವಾಮಿ ಕುರಿತು ಪತ್ರಕರ್ತ ಸರಜೂ ಕಾಟ್ಕರ್ ಉಪನ್ಯಾಸ ನೀಡುವರು’ ಎಂದು ವಿವರಿಸಿದರು.
ಟ್ರಸ್ಟ್ ಸದಸ್ಯರಾದ ಎಂ.ಎನ್.ಸುಬ್ರಹ್ಮಣ್ಯ, ಕೆ.ವಿ.ಬಲರಾಮ, ನಗರ ಶ್ರೀನಿವಾಸ ಉಡುಪ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಉಪನಿರ್ದೇಶಕಿ ವಿದ್ಯಾವತಿ ಭಜಂತ್ರಿ ಇದ್ದರು.
Laxmi News 24×7