ಬೆಳಗಾವಿ ನಗರದಲ್ಲಿ ಮಹಿಳೆಯರ ಸುರಕ್ಷತೆಗಾಗಿ ಜಾರಿಗೆ ಬಂದಿರುವ ‘ಅಕ್ಕಪಡೆ’ ಇಂದು ಅತ್ಯಂತ ಶ್ಲಾಘನೀಯ ಕಾರ್ಯಾಚರಣೆ ನಡೆಸಿದೆ. ನಗರದ ಟಿಳಕವಾಡಿ ಪ್ರದೇಶದಲ್ಲಿ ತನ್ನ ಪತ್ನಿ ಮತ್ತು ಇಬ್ಬರು ಮಕ್ಕಳನ್ನು ಮನೆಯ ಬೆಡ್ರೂಮ್ನಲ್ಲಿ ಕೂಡಿ ಹಾಕಿ ದೈಹಿಕ ಹಾಗೂ ಮಾನಸಿಕ ಹಿಂಸೆ ನೀಡುತ್ತಿದ್ದ ವ್ಯಕ್ತಿಯನ್ನು ಬಂಧಿಸಲಾಗಿದ್ದು, ಅಕ್ಕಪಡೆ ಸಿಬ್ಬಂದಿಗಳು ಮಹಿಳೆಯನ್ನು ರಕ್ಷಿಸಿ ಸುರಕ್ಷಿತವಾಗಿ ದೆಹಲಿಗೆ ಕಳುಹಿಸಿಕೊಟ್ಟಿದ್ದಾರೆ.
ಬೆಳಗಾವಿ: ನಗರದ ಟಿಳಕವಾಡಿ ಪ್ರದೇಶದಲ್ಲಿ ಗಂಡನ ಕ್ರೌರ್ಯಕ್ಕೆ ಬಲಿಯಾಗಿ ಮನೆಯೊಳಗೆ ಬಂಧಿಯಾಗಿದ್ದ ಮಹಿಳೆ ಮತ್ತು ಇಬ್ಬರು ಮಕ್ಕಳನ್ನು ಬೆಳಗಾವಿ ನಗರದ ಅಕ್ಕಪಡೆ ಯಶಸ್ವಿಯಾಗಿ ರಕ್ಷಿಸಿದೆ. ಸಂತ್ರಸ್ತೆಯನ್ನು ಬೆಡ್ರೂಮ್ನಲ್ಲಿ ಲಾಕ್ ಮಾಡಿ ಹಿಂಸೆ ನೀಡುತ್ತಿರುವ ಬಗ್ಗೆ ದೆಹಲಿಯಿಂದ ಬಂದ ಫೋನ್ ಕರೆಯ ಮಾಹಿತಿಯ ಮೇರೆಗೆ, ಮಹಿಳಾ ಪೊಲೀಸ್ ಠಾಣೆಯ ಇನ್ಸ್ಪೆಕ್ಟರ್ ಡಿ. ಪಿ. ನಿಂಬಾಳಕರ್ ಅವರು ತಕ್ಷಣ ಕಾರ್ಯಾಚರಣೆಗೆ ಸೂಚಿಸಿದರು. ಕೂಡಲೇ ಸ್ಥಳಕ್ಕೆ ಧಾವಿಸಿದ ಅಕ್ಕಪಡೆಯ ಅಧಿಕಾರಿ ಮತ್ತು ಸಿಬ್ಬಂದಿಗಳಾದ ಶ್ರೀಮತಿ ಎ. ರುಕ್ಷ್ಮಿಣಿ (PSI), ಆರ್. ಐ. ಕಡಲಗಿ, ಸ್ವಷ್ಮಾ ಗೋಂದಳಿ, ರೂಪಶ್ರೀ ಯಮಕನಮರಡಿ ಮತ್ತು ಸಿದ್ದಪ್ಪ ಸಾಂಗ್ಲಿ ಅವರು ಮನೆಯ ಬಾಗಿಲು ತೆರೆಯಿಸಿ ಮಹಿಳೆಯನ್ನು ರಕ್ಷಿಸಿದ್ದಾರೆ. ರಕ್ಷಿಸಲ್ಪಟ್ಟ ಮಹಿಳೆಗೆ ವೈದ್ಯಕೀಯ ಚಿಕಿತ್ಸೆ ನೀಡಿ, ದೂರಿನ ಮೇರೆಗೆ ಆಕೆಯ ಪತಿಯನ್ನು ವಶಕ್ಕೆ ಪಡೆಯಲಾಗಿದೆ. ಸಂತ್ರಸ್ತೆಯ ಸುರಕ್ಷತೆಯ ದೃಷ್ಟಿಯಿಂದ ಆಕೆಯನ್ನು ಮಕ್ಕಳ ಸಮೇತ ದೆಹಲಿಗೆ ವಿಮಾನದ ಮೂಲಕ ಕಳುಹಿಸಿಕೊಡಲಾಗಿದೆ.
ಕಳೆದ ಫೆಬ್ರವರಿ 17ರಿಂದ ಬೆಳಗಾವಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಅಕ್ಕಪಡೆಯು ಮಹಿಳಾ ಸುರಕ್ಷತೆಯಲ್ಲಿ ಮಹತ್ತರ ಮೈಲಿಗಲ್ಲು ಸ್ಥಾಪಿಸಿದೆ. ಇಲ್ಲಿಯವರೆಗೆ ಅಕ್ಕಪಡೆಯು 70 ಶಾಲೆ-ಕಾಲೇಜುಗಳು, ಬಸ್ ನಿಲ್ದಾಣ ಹಾಗೂ ಹಾಸ್ಟೆಲ್ಗಳಿಗೆ ಭೇಟಿ ನೀಡಿ 91 ಜಾಗೃತಿ ಕಾರ್ಯಕ್ರಮಗಳನ್ನು ನಡೆಸಿದೆ. ಈ ಅವಧಿಯಲ್ಲಿ ಇಬ್ಬರು ಮಹಿಳೆಯರನ್ನು ರಕ್ಷಿಸಿರುವ ಪಡೆ, 8 ಕೌಟುಂಬಿಕ ಕಲಹಗಳನ್ನು ಬಗೆಹರಿಸಿದೆ. ಅಲ್ಲದೆ, ಸಾರ್ವಜನಿಕ ಸ್ಥಳಗಳಲ್ಲಿ ಅಸಭ್ಯ ವರ್ತನೆ ಮತ್ತು ಚುಡಾಯಿಸುವಿಕೆಗೆ ಸಂಬಂಧಿಸಿದಂತೆ ಕರ್ನಾಟಕ ಪೊಲೀಸ್ ಕಾಯ್ದೆಯಡಿ ಒಟ್ಟು 55 ಪ್ರಕರಣಗಳನ್ನು ದಾಖಲಿಸಿದೆ. ಮಹಿಳೆಯರು ಮತ್ತು ಮಕ್ಕಳ ರಕ್ಷಣೆಗೆ ಅಕ್ಕಪಡೆ ಸದಾ ಸಿದ್ಧವಿದ್ದು, ಅಕ್ಕಪಡೆಯ ಈ ಕಾರ್ಯವೈಖರಿಯನ್ನು ಬೆಳಗಾವಿ ನಗರ ಪೊಲೀಸ್ ಆಯುಕ್ತರು ಶ್ಲಾಘಿಸಿದ್ದಾರೆ.
Laxmi News 24×7