ಬೆಂಗಳೂರು: ಕೊರೋನಾ ಲಾಕ್ಡೌನ್ ನಡುವೆಯೇ ಕೊನೆಗೂ ರಾಜ್ಯದಲ್ಲಿ ಮದ್ಯ ಮಾರಾಟಕ್ಕೆ ಅವಕಾಶ ನೀಡಲಾಗಿದೆ. ಎರಡು ದಿನಗಳಿಂದ ಮಹಿಳೆಯರು ಮತ್ತು ಪುರುಷರು ಎನ್ನದೇ ಎಲ್ಲಾ ವಯೋಮಾನದವರು ಬೆಳಿಗ್ಗೆ 7 ಗಂಟೆಯಿಂದಲೇ ವೈನ್ ಸ್ಟೋರ್ಗಳು, ಎಂಆರ್ಪಿ ಎಣ್ಣೆ ಅಂಗಡಿಗಳ ಮುಂದೆ ನಿಂತು ಮದ್ಯ ಖರೀದಿ ಮಾಡುತ್ತಿದ್ದಾರೆ. ಕೊರೋನಾ ವೈರಸ್ ಕಾರಣ ಮದ್ಯಪ್ರಿಯರು ಸರತಿ ಸಾಲಿನಲ್ಲಿ ನಿಂತು ಸರ್ಕಾರದ ನಿಯಮಗಳನ್ನು ಪಾಲಿಸುತ್ತಿರುವುದು ನೋಡುತ್ತಿದ್ದೇವೆ.
ಹೀಗಿರುವಾಗ ರಾಜ್ಯದಲ್ಲಿ ಎಂಆರ್ಪಿ ಹಾಗೂ ಎಂಎಸ್ಐಎಲ್ ಮಳಿಗೆಗಳಲ್ಲಿ ಮಾತ್ರ ಮದ್ಯ ಮಾರಾಟ ಮಾಡಲು ಅವಕಾಶ ನೀಡಿರುವ ಸಿಎಂ ಬಿಎಸ್ ಯಡಿಯೂರಪ್ಪ ನಡೆಗೆ ಬಾರ್ ಅಂಡ್ ರೆಸ್ಟೋರೆಂಟ್ ಮಾಲೀಕರು ವಿರೋಧ ವ್ಯಕ್ತಪಡಿಸಿದ್ದಾರೆ. ರಾಜ್ಯದ ಸುಮಾರು 4700 ಮದ್ಯಮಾರಾಟ ಮಳಿಗೆಗಳಲ್ಲಿ ಮದ್ಯ ಮಾರಾಟ ಮಾಡಲಾಗುತ್ತಿದೆ. ಬಾರ್ ಮತ್ತು ರೆಸ್ಟೋರೆಂಟ್ಗಳಲ್ಲಿ ಮದ್ಯ ಮಾರಾಟಕ್ಕೆ ಅವಕಾಶ ನೀಡದಿರುವುದು ಯಾಕೇ? ಎಂದು ಪ್ರಶ್ನಿಸಿದ್ಧಾರೆ.
ನಾವು ಔಟ್ಲೆಟ್ಗಳಿಗಿಂತಲೂ ಹೆಚ್ಚಿಗೆ ಟ್ಯಾಕ್ಸ್ ಕಟ್ಟುತ್ತೇವೆ. ನಮಗೂ ಸಾಮಾಜಿಕ ಅಂತರದಲ್ಲೇ ವ್ಯಾಪಾರಕ್ಕೆ ಅವಕಾಶ ಕೊಡಿ. ಹೋಟೆಲ್ನಲ್ಲಿ ಈಗಾಗಲೆ ಕೇವಲ ಪಾರ್ಸಲ್ಗೆ ಮಾತ್ರ ಅವಕಾಶ ನೀಡಿದ್ದೀರಿ. ಸಾಮಾಜಿಕ ಅಂತರ ಕಾಯ್ದುಕೊಳ್ಳುವಂತೆ ಆದೇಶಿಸಿ ಎಸಿ ಬಳಕೆ ಮಾಡದೇ ವ್ಯಾಪಾರಕ್ಕೆ ಅವಕಾಶ ಕೊಡಿ ಎಂದು ಒತ್ತಾಯಿಸಿದ್ದಾರೆ ಬಾರ್ ಅಂಡ್ ರೆಸ್ಟೋರೆಂಟ್ ಮಾಲೀಕರು.
ಬಾರ್ ಅಂಡ್ ರೆಸ್ಟೋರೆಂಟ್ ಶೇ.60ರಷ್ಟು ಇವೆ. ಒಂದೂವರೆ ತಿಂಗಳಿಂದ ಬಾಗಿಲು ಹಾಕಿದ್ದೇವೆ. ಬಾಡಿಕೆ ಕಟ್ಟಬೇಕು, ಸಾಲ ಮಾಡಿದ್ದೇವೆ ಬ್ಯಾಂಕ್ಗಳಿಗೆ ಇಎಂಐ ಕಟ್ಟಬೇಕು. ಕೆಲಸಗಾರರಿಗೆ ಸಂಬಳ ಕೊಡಬೇಕು. ನಷ್ಟ ಅನುಭವಿಸಿದ್ದೇವೆ. ನಮಗೂ ಎಣ್ಣೆ ವ್ಯಾಪಾರಕ್ಕೆ ಅವಕಾಶ ಕೊಡಿ ಎಂದು ಸಿಎಂ ಬಿ.ಎಸ್ ಯಡಿಯೂರಪ್ಪರನ್ನು ನಿಯೋಗ ಭೇಟಿ ಮಾಡಿ ಮನವಿ ಮಾಡಿದೆ.
Laxmi News 24×7