ಶಿವಮೊಗ್ಗ: ಇಲ್ಲಿನ ಮೃಗಾಲಯದಲ್ಲಿ ನೀರಾನೆ ದಾಳಿಯಿಂದ ಮೃತಪಟ್ಟ ಟ್ರೈನಿ ಪಶುವೈದ್ಯೆ ಡಾ.ಸಮೀಕ್ಷಾ ರೆಡ್ಡಿ ಅವರ ಹೆಸರನ್ನು ಬನ್ನೇರುಘಟ್ಟದಲ್ಲಿ ಈಚೆಗೆ ಜನಿಸಿದ ಆನೆ ಮರಿಗೆ ನಾಮಕರಣ ಮಾಡುವುದಾಗಿ ಮೃಗಾಲಯ ಪ್ರಾಧಿಕಾರದ ಅಧ್ಯಕ್ಷ ಹಾಡ್ಯ ರಂಗಸ್ವಾಮಿ ತಿಳಿಸಿದರು.
ಶಿವಮೊಗ್ಗ ಮೃಗಾಲಯಕ್ಕೆ ಭೇಟಿ ನೀಡಿದ್ದ ಅವರು ಅಧಿಕಾರಿಗಳ ಬಳಿ ಮಾಹಿತಿ ಪಡೆದು ನಂತರ ಸುದ್ದಿಗಾರರೊಂದಿಗೆ ಮಾತನಾಡಿದರು. ಇದರ ಜೊತೆಗೆ ಡಾ.ಸಮೀಕ್ಷಾ ರೆಡ್ಡಿ ಅವರಿಗೆ ಹುತಾತ್ಮ ಪಟ್ಟ ನೀಡುವ ಬಗ್ಗೆಯೂ ಸರ್ಕಾರದ ಹಂತದಲ್ಲಿ ಚರ್ಚಿಸಲಾಗುವುದು. ಡಾ.ಸಮೀಕ್ಷಾ ರೆಡ್ಡಿ ಸಾವು ತೀವ್ರ ಆಘಾತ ತಂದಿದೆ. ಇಂತಹ ಘಟನೆ ನಡೆಯಬಾರದಿತ್ತು, ನಡೆದಿದೆ. ಪೊಲೀಸ್ ಹಾಗೂ ಅರಣ್ಯ ಇಲಾಖೆ ವತಿಯಿಂದ ಘಟನೆ ಕುರಿತು ತನಿಖೆ ನಡೆಯುತ್ತಿದೆ. ವರದಿ ಬಂದ ಮೇಲೆ ಯಾರೇ ತಪ್ಪಿತಸ್ಥರಿದ್ದರೂ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.
ನೀರಾನೆ ಎರಡು ಬಾರಿ ಮರಿ ಕಳೆದುಕೊಂಡಿದೆ. ಮೂರನೇ ಸಲ ಗರ್ಭ ಧರಿಸಿದ್ದು ಈ ಬಾರಿಯಾದರೂ ಮರಿ ಉಳಿಸಿಕೊಳ್ಳಬೇಕೆಂಬ ವಿಶೇಷ ಕಾಳಜಿಯಿಂದ ಸಮೀಕ್ಷಾ ಅವರ ಮೇಲೆ ದಾಳಿ ಮಾಡಿರಬಹುದು ಎಂದು ಶಂಕಿಸಲಾಗಿದೆ.
Laxmi News 24×7