ಬೆಳಗಾವಿ : ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬರುವ ಮುಂಚೆ ಲೈಂಗಿಕ ಅಲ್ಪಸಂಖ್ಯಾತರಿಗೆ 200 ಕೋಟಿ ರೂ. ಮೀಸಲಿಡುವುದಾಗಿ ಚುನಾವಣೆ ಪ್ರಣಾಳಿಕೆಯಲ್ಲಿ ಘೋಷಿಸಿತ್ತು. ಆದರೆ ಅಧಿಕಾರಕ್ಕೆ ಬಂದು ಎರಡೂವರೆ ವರ್ಷವಾದರೂ ತನ್ನ ಮಾತು ಉಳಿಸಿಕೊಳ್ಳುತ್ತಿಲ್ಲ. ಈ ಸಲದ ಬಜೆಟ್‌ನಲ್ಲಾದರೂ ಅನುದಾನ ಕೊಡಬೇಕು. ಇಲ್ಲದಿದ್ದಲ್ಲಿ ರಾಜ್ಯಾದ್ಯಂತ ಹೋರಾಟ ಮಾಡಲಾಗುವುದು ಎಂದು ಲಿಂಗತ್ವ ಮತ್ತು ಲೈಂಗಿಕ ಬಹುತ್ವಕ್ಕಾಗಿ ಚಳವಳಿಯ ರಾಜ್ಯ ಸಮಿತಿ ಸದಸ್ಯೆ ಐನಾ ಹೇಳಿದರು.
ನಗರದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಚುನಾವಣೆ ಪ್ರಚಾರದಲ್ಲಿ ಲೈಂಗಿಕ ಅಲ್ಪಸಂಖ್ಯಾತರ ಅಭಿವೃದ್ಧಿಗಾಗಿ ಪ್ರತಿವರ್ಷ 200 ಕೋಟಿ ಕೊಡುವುದಾಗಿ ಭರಸವೆನೀಡಿದ್ದರು. ಆದರೆ ವಾಗ್ದಾನ ಮಾಡಿದಂತೆ ನಡೆದುಕೊಂಡಿಲ್ಲ. ಈ ಸಲದ ಬಜೆಟ್‌ನಲ್ಲಾದರೂ ಈ ಸಮುದಾಯಕ್ಕಾಗಿ ಪ್ರತ್ಯೇಕ ಅನುದಾನ ಘೋಷಿಸಲೇಬೇಕು. ಇಲ್ಲದಿದ್ದಲ್ಲಿ ಹೋರಾಟ ನಿಶ್ಚಿತ ಎಂದು ಎಚ್ಚರಿಸಿದರು.
ಕರ್ನಾಟಕ ಲಿಂಗತ್ವ ಮತ್ತು ಲೈಂಗಿಕ ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮ ಸ್ಥಾಪಿಸಬೇಕು. ಇಷ್ಟು ವರ್ಷ ವಿಳಂಬ ಮಾಡಿದ್ದಕ್ಕೆ 200 ಬದಲಿಗೆ ಈ ಬಜೆಟ್‌ನಲ್ಲಿ 250 ಕೋಟಿ ರೂ. ಕೊಡಬೇಕು. ವಸತಿ ನಿಲಯ, ಶಾರ್ಟ್ ಸ್ಟೇ ಹೋಮ್‌ಗಳನ್ನು ಒದಗಿಸಬೇಕು. ಪ್ರತಿ ವರ್ಷ ಕನಿಷ್ಠ 500 ಫಲಾನುಭವಿಗಳಿಗೆ ಮನೆ ಹಂಚಿಕೆ ಮಾಡಬೇಕು. ಕೃಷಿಯಲ್ಲಿ ಆಸಕ್ತಿವುಳ್ಳವರಿಗೆ 2 ಎಕರೆ ಭೂಮಿ ನೀಡಬೇಕು. ಗೋಮಾಳ ಜಮೀನನ್ನು ಗುತ್ತಿಗೆ ಆಧಾರದಲ್ಲಾದರೂ ಹಂಚಿಕೆ ಮಾಡಬೇಕು. ಸ್ವ ಉದ್ಯೋಗ ಕೈಗೊಳ್ಳಲು ಬಡ್ಡಿ ರಹಿತ ಸಾಲ, ಸಬ್ಸಿಡಿ ಒದಗಿಸಬೇಕು. ಮೈತ್ರಿ ಪಿಂಚಣೆ 2,000ರೂ. ಗೆ ಏರಿಸಬೇಕು. ಶೇ.1ರ ಮೀಸಲಾತಿ ಕಟ್ಟುನಿಟ್ಟಾಗಿ ಜಾರಿಗೆ ತರಬೇಕು ಎಂಬಿತ್ಯಾದಿ ಬೇಡಿಕೆಗಳನ್ನು ಈ ಸರ್ಕಾರದ ಮುಂದಿಟ್ಟಿದ್ದೇವೆ ಎಂದು ಹೇಳಿದರು.
ಜೀವನ ವಿವೇಕ ಪ್ರತಿಷ್ಠಾನದ ಅಮಿತಾ, ಸಾಧನಾ ಮಹಿಳಾ ಸಂಸ್ಥೆಯ ಅನ್ನಪೂರ್ಣ, ಮಜದೂರ ನವ ನಿರ್ಮಾಣ ಸಂಘಟನೆಯ ಕವಿತಾ ಸುದ್ದಿಗೋಷ್ಠಿಯಲ್ಲಿದ್ದರು.
Laxmi News 24×7