ಬೆಂಗಳೂರು, ಏಪ್ರಿಲ್ 25: ರಾಜ್ಯದಲ್ಲಿ ಕೊರೊನಾ ಲಾಕ್‌ಡೌನ್ ಸಂದರ್ಭದಲ್ಲಿ ಎಗ್ಗಿಲ್ಲದೆ ಮದ್ಯ ಸರಬರಾಜು ಆಗುತ್ತಿದೆ. ಮುಖ ಬೆಲೆಯ ಹತ್ತು ಪಟ್ಟಿಗೂ ಹೆಚ್ಚಿನ ಬೆಲೆಯಲ್ಲಿ ಮದ್ಯ ಸರಬರಾಜು ಮಾಡಿ ನೂರಾರು ಕೋಟಿ ರೂಪಾಯಿಗಳ ಅಕ್ರಮ ಗಳಿಕೆಗೆ ಈ ಲಾಕ್ ಡೌನ್ ಸಂದರ್ಭವನ್ನು ದುರ್ಬಳಕೆ ಮಾಡಿಕೊಳ್ಳುತ್ತಿರುವ ಸಮಾಜ ವಿದ್ರೋಹಿ ಶಕ್ತಿಗಳ ಹಿಂದೆ ಅಧಿಕಾರಸ್ಥರ ನೇರ ಕೈವಾಡವಿರುವುದು ಕಂಡುಬರುತ್ತಿದೆ ಎಂದು ಕರ್ನಾಟಕ ಆಮ್ ಆದ್ಮಿ ಪಕ್ಷ ಆರೋಪಿಸಿದೆ. ಬೆಂಗಳೂರು ನಗರದ ಎಸಿಪಿ ವಾಸು ಎಂಬುವವರು ನಗರದ ಹೆಚ್ಚುವರಿ ಪೊಲೀಸ್ ಆಯುಕ್ತರ ಮೇಲೆ ನೇರ ಆಪಾದನೆಯನ್ನು ಮಾಡುವ ಮೂಲಕ ರಾಜ್ಯದ ಉನ್ನತ ಮಟ್ಟದ ಅಧಿಕಾರಸ್ಥರ ನೇರ ಕೈವಾಡವಿರುವುದು ಇದೀಗ ಬೆಳಕಿಗೆ ಬಂದಿದೆ. ಈ ಪ್ರಕರಣದಲ್ಲಿ ಸರ್ಕಾರಿ ವಾಹನಗಳನ್ನೇ ಈ ಅಕ್ರಮ ಮದ್ಯ ಸರಬರಾಜು ದಂಧೆಗೆ ಬಳಸಿಕೊಳ್ಳುತ್ತಿರುವುದು ದುರಂತದ ಸಂಗತಿಯೇ ಆಗಿದೆ ಎಂದು ಆರೋಪಿಸಿದೆ.
ಒಂದು ಕಡೆ ರಾಜ್ಯದಲ್ಲಿ ಮದ್ಯ ಪೂರೈಕೆ ಇಲ್ಲದೆ ಕಡು ಬಡತನದಿಂದ ಬಳಲುತ್ತಿರುವ ಮದ್ಯ ವ್ಯಸನಿಗಳು ಮದ್ಯ ದೊರಕದೆ ಆತ್ಮಹತ್ಯೆಯಂತಹ ದಾರಿಯನ್ನು ಹಿಡಿದು ಈಗಾಗಲೇ 25 ಕ್ಕೂ ಹೆಚ್ಚು ಬಲಿಯಾಗಿದೆ .ಮತ್ತೊಂದು ಕಡೆ ಸಿರಿವಂತ ಮದ್ಯ ವ್ಯಸನಿಗಳ ಮಧ್ಯ ಪೂರೈಕೆಗಾಗಿ ಅಲ್ಲಲ್ಲಿ ಮದ್ಯದಂಗಡಿ ಮಾಲೀಕರುಗಳೇ ಕಳ್ಳತನವನ್ನು ಮಾಡಿಸಿ ಕಾಟಾಚಾರ ಎಫ್ಐಆರ್ ಮಾಡುವ ಮೂಲಕ ಈ ನೂರಾರು ಕೋಟಿ ಅಕ್ರಮ ದಂಧೆಗೆ ಇಂಬು ನೀಡುತ್ತಿರುವ ವಿಷಯ ಮಾಧ್ಯಮಗಳಲ್ಲಿ ಪ್ರಕಟವಾಗಿದೆ ಎಂದು ಆರೋಪಿಸಲಾಗಿದೆ.