ನವದೆಹಲಿ: ರಾಷ್ಟ್ರೀಯ ಯುವ ಕಾಂಗ್ರೆಸ್ ಅಧ್ಯಕ್ಷ ಶ್ರೀನಿವಾಸ್ ಬಿ.ವಿ. ಅವರು ಸುಪ್ರೀಂಕೋರ್ಟ್‌ನಲ್ಲಿ ದಾವೆ ಹೂಡಿದ್ದಾರೆ. ತಮ್ಮ ವಿರುದ್ಧ ದಾಖಲಾಗಿರುವ ಲೈಂಗಿಕ ಕಿರುಕುಳ ಪ್ರಕರಣದ ಎಫ್‌ಐಆರ್ ವಜಾ ಮಾಡಬೇಕೆಂದು ಅವರು ನ್ಯಾಯವಾದಿ ದೇವದತ್ತ ಕಾಮತ್ ಅವರ ಮೂಲಕ ಅರಿಕೆ ಮಾಡಿಕೊಂಡಿದ್ದಾರೆ.
ಮುಖ್ಯ ನ್ಯಾಯಮೂರ್ತಿ ಡಿ.ವೈ.ಚಂದ್ರಚೂಡ್ ನೇತೃತ್ವದ ನ್ಯಾಯಪೀಠದ ಮುಂದೆ ಪ್ರಕರಣ ವಿಚಾರಣೆಗೆ ಬಂದಿದೆ. ಪ್ರತಿಪಕ್ಷದ ಪ್ರಮುಖ ನಾಯಕರೊಬ್ಬರಿಗೆ ಅಸ್ಸಾಂನಲ್ಲಿ ವಿನಾ ಕಾರಣ ಕಿರುಕುಳ ನೀಡಲಾಗುತ್ತಿದೆ ಎಂದು ಕಾಮತ್ ನ್ಯಾಯಪೀಠದ ಮುಂದೆ ಅರಿಕೆ ಮಾಡಿಕೊಂಡಿದ್ದಾರೆ. ಪ್ರಕರಣವನ್ನು ಪರಿಶೀಲಿಸಿದ ಮುಖ್ಯ ನ್ಯಾಯಮೂರ್ತಿ ಡಿ.ವೈ.ಚಂದ್ರಚೂಡ್ ಅವರು ಮೇ 15ರಂದು ಪ್ರಕರಣವನ್ನು ಲಿಸ್ಟ್ ಮಾಡಲು ಒಪ್ಪಿಕೊಂಡಿದ್ದಾರೆ.
ಮೇ 4ರಂದು ಗುವಾಹಟಿ ಹೈಕೋರ್ಟ್‌ನ ಏಕಸದಸ್ಯ ನ್ಯಾಯಪೀಠ ಶ್ರೀನಿವಾಸ್ ಬಿ.ವಿ. ಅವರು ಸಲ್ಲಿಸಿದ್ದ ಎಫ್‌ಐಆರ್ ವಜಾ ಅರ್ಜಿಯನ್ನು ತಿರಸ್ಕರಿಸಿತ್ತು. ಅಸ್ಸಾಂ ಯುವ ಕಾಂಗ್ರೆಸ್‌ನ ಮಾಜಿ ಅಧ್ಯಕ್ಷೆ ಮತ್ತು ಉಚ್ಚಾಟಿತ ನಾಯಕಿ ಡಾ.ಆಂಗಿಕಾ ದತ್ತಾ ಅವರಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪವನ್ನು ಶ್ರೀನಿವಾಸ್ ಎದುರಿಸುತ್ತಿದ್ದಾರೆ.