ಪಿರಿಯಾಪಟ್ಟಣ: ಪ್ರಧಾನಿ ನರೇಂದ್ರ ಮೋದಿಗೆ ಸಿದ್ದರಾಮಯ್ಯ ಕಂಡರೆ ಭಯ. ಹಾಗಾಗಿ ಮೇಲಿಂದ ಮೇಲೆ ಕರ್ನಾಟಕಕ್ಕೆ ಬರುತ್ತಿದ್ದು, ಇನ್ನೂ ಇಪ್ಪತ್ತು ಬಾರಿ ಬಂದರೂ ಬಿಜೆಪಿಗೆ ಸೋಲು ಕಟ್ಟಿಟ್ಟಬುತ್ತಿ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ತಿಳಿಸಿದರು.
ಪಟ್ಟಣದಲ್ಲಿ ನಡೆದ ಕಾಂಗ್ರೆಸ್ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದ ಅವರು, ಬಿಜೆಪಿ ಶಾಸಕರನ್ನು ಖರೀದಿಸಿ ಹಿಂಬಾಗಿಲ ಮೂಲಕ ಅಧಿಕಾರಕ್ಕೆ ಬಂದು ಸರಕಾರದ ಬೊಕ್ಕಸಕ್ಕೆ ಕೋಟ್ಯಂತರ ರೂ. ನಷ್ಟ ಮಾಡಿ ಭ್ರಷ್ಟಾಚಾರದಲ್ಲಿ ಮುಳುಗಿಸಿಟ್ಟಿದ್ದಾರೆ. ರಾಜ್ಯಕ್ಕೆ ಮೋದಿ ಕೊಡುಗೆ ಶೂನ್ಯ, ರಾಜ್ಯದಲ್ಲಿ ನಡೆಯುತ್ತಿರುವ ಭ್ರಷ್ಟಚಾರ, 40% ಕಮಿಷನ್ ದಂಧೆ ಬಗ್ಗೆ ಮಾತನಾಡಲಿಲ್ಲ ಎಂದು ದೂರಿದರು.
ನೆರೆ ಪ್ರವಾಹ ಬಂದಾಗ ಇವರು ರಾಜ್ಯಕ್ಕೆ ಬರಲಿಲ್ಲ. ಆದರೆ, ಈಗ ಚುನಾವಣೆ ಗೆಲ್ಲಲೇಬೇಕು ಎಂಬ ಹುಂಬತನಕ್ಕೆ ಬಿದ್ದು, ರಾಜ್ಯಕ್ಕೆ ಪದೇಪದೆ ಬರುತ್ತಿದ್ದಾರೆ. ಯಾವ ಒಬ್ಬ ಪ್ರಧಾನಿಯೂ ಚುನಾವಣೆಗೋಸ್ಕರ ಇಷ್ಟು ಬಾರಿ ರಾಜ್ಯಕ್ಕೆ ಪ್ರವೇಶ ಮಾಡಿರಲಿಲ್ಲ, ಮೋದಿ ಇನ್ನೂ 20 ಬಾರಿ ಬಂದರೂ ಬಿಜೆಪಿಗೆ ಸೋಲು ಕಟ್ಟಿಟ್ಟ ಬುತ್ತಿ, ದೇಶದಲ್ಲಿ ಟೆರಸಿಸಂ ಸತ್ತಿದೆ ಎಂದರೆ ಅದಕ್ಕೆ ಕಾರಣ ಇಂದಿರಾ ಗಾಂಧಿ. ಬಿಜೆಪಿ ನಾಯಕರು ಸ್ವಾತಂತ್ರ್ಯಕ್ಕಾಗಿ ಹೋರಾಟ ಮಾಡಿಲ್ಲ ಎಂದರು.
ನಡ್ಡಾ ವಿರುದ್ಧ ಸಿದ್ದರಾಮಯ್ಯ ವಾಗ್ಧಾಳಿ
ಬೆಂಗಳೂರು: ರಾಜ್ಯದಲ್ಲಿ ಬಿಜೆಪಿ ಸರಕಾರ ಸೋತರೆ ಯೋಜನೆಗಳಲ್ಲ ಬಂದ್ ಎಂಬ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ ಹೇಳಿಕೆ ಸ್ಪಷ್ಟವಾಗಿ ಮತದಾರರಿಗೆ ಒಡ್ಡಿರುವ ಬೆದರಿಕೆಯಾಗಿದೆ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಟ್ವಿಟರ್‌ನಲ್ಲಿ ವಾಗ್ಧಾಳಿ ನಡೆಸಿದ್ದಾರೆ. ಈ ಸಂಬಂಧ ಚುನಾವಣ ಆಯೋಗ ತತ್‌ಕ್ಷಣ ಮಧ್ಯೆ ಪ್ರವೇಶಿಸಿ ಬಿಜೆಪಿಯ ಎಲ್ಲ ಅಭ್ಯರ್ಥಿಗಳನ್ನು ಅನರ್ಹಗೊಳಿಸುವ ದಿಟ್ಟ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದ್ದಾರೆ.