ಚಿಕ್ಕೋಡಿ (ಬೆಳಗಾವಿ ಜಿಲ್ಲೆ): ‘ಕಾಂಗ್ರೆಸ್‌ನ ಗ್ಯಾರಂಟಿಗಳ ಮೊತ್ತವು ರಾಜ್ಯ ಬಜೆಟ್‌ಗಿಂತಲೂ ಹೆಚ್ಚಾಗಿದೆ. ಕರ್ನಾಟಕದ ಜನ ಎಲ್ಲ ಲೆಕ್ಕ ಹಾಕಿದ್ದಾರೆ. ಆದರೆ, ಇದು ರಾಹುಲ್ ಗಾಂಧಿಗೆ ಅರ್ಥವಾಗಿಲ್ಲ’ ಎಂದು ಕೇಂದ್ರ ಗೃಹಸಚಿವ ಅಮಿತ್ ಶಾ ಟೀಕಿಸಿದರು.
ಪಟ್ಟಣದಲ್ಲಿ ಶನಿವಾರ ಬಿಜೆಪಿ ಅಭ್ಯರ್ಥಿ ರಮೇಶ ಕತ್ತಿ ಪರ ಚುನಾವಣಾ ಪ್ರಚಾರ ಮಾಡಿ ಮಾತನಾಡಿದ ಅವರು, ‘ಗುಜರಾತ್, ಉತ್ತರಪ್ರದೇಶ, ಉತ್ತರಾಖಂಡ, ಅಸ್ಸಾಂ, ತ್ರಿಪುರಾ, ಮಣಿಪುರ, ನಾಗಾಲ್ಯಾಂಡ್ ರಾಜ್ಯಗಳಲ್ಲಿ ಕೂಡ ಕಾಂಗ್ರೆಸ್ ಇವೇ ಐದು ಗ್ಯಾರಂಟಿಗಳನ್ನು ನೀಡಿತ್ತು. ಆ ಎಲ್ಲ ಕಡೆ ಗ್ಯಾರಂಟಿ ಕಾರ್ಡ್‌ಗಳು ಹೇಳ ಹೆಸರಿಲ್ಲದಂತೆ ಹೋದವು. ಅದರಿಂದ ಬುದ್ಧಿ ಕಲಿಯದ ರಾಹುಲ್ ಬಾಬಾ ಕರ್ನಾಟಕದಲ್ಲಿ ಮತ್ತೆ ಗ್ಯಾರಂಟಿ ಕಾರ್ಡ್ ಹಿಡಿದು ಓಡಾಡುತ್ತಿದ್ದಾರೆ. ಆದರೆ, ಇಲ್ಲಿನ ಪ್ರಜ್ಞಾವಂತ ಜನರು ಮತ್ತೆ ಅವುಗಳನ್ನು ಕಸದಬುಟ್ಟಿಗೆ ಹಾಕಲಿದ್ದಾರೆ’ ಎಂದರು.
‘ಅವರಂತೆ ಬಿಜೆಪಿ ಸುಳ್ಳು ಹೇಳುವುದಿಲ್ಲ. ಇಡೀ ದೇಶದಾದ್ಯಂತ ನಮ್ಮದು ಒಂದೇ ಗ್ಯಾರಂಟಿ ಕಾರ್ಡ್ ಇದೆ; ಅವರೇ ಪ್ರಧಾನಿ ನರೇಂದ್ರ ಮೋದಿ’ ಎಂದೂ ಹೇಳಿದರು.
ಅಥಣಿಯಲ್ಲಿ ಮಹೇಶ ಕುಮಠಳ್ಳಿ ಪರ ಚುನಾವಣಾ ಭಾಷಣ ಮಾಡಿದ ಅವರು, ‘ಇಡೀ ರಾಜ್ಯದ ಚುನಾವಣೆಯೇ ಬೇರೆ ಅಥಣಿ ಚುನಾವಣೆಯೇ ಬೇರೆ. ಸ್ವಾರ್ಥಕ್ಕಾಗಿ ಬಿಜೆಪಿಗೆ ಮೋಸ ಮಾಡಿದ ಲಕ್ಷ್ಮಣ ಸವದಿಯನ್ನು ಈ ಬಾರಿಯೂ ಸೋಲಿಸಿ’ ಎಂದು ಕರೆ ನೀಡಿದರು. ನಂತರ ಅವರು ಬೆಳಗಾವಿ ನಗರ ಹಾಗೂ ರಾಯಬಾಗದಲ್ಲಿ ಅವರು ರೋಡ್ ಶೋ ನಡೆಸಿದರು.