ಬೆಳಗಾವಿ: ‘ಶಿವಸೇನಾ(ಉದ್ಧವ್ ಠಾಕ್ರೆ ಬಣ) ಜತೆಗಿನ ಮೈತ್ರಿ ಮಹಾರಾಷ್ಟ್ರಕ್ಕೆ ಮಾತ್ರ ಸೀಮಿತ. ರಾಜ್ಯದ ಹೊರಗೆ ನಾವು ಯಾವುದೇ ಮೈತ್ರಿ ಮಾಡಿಕೊಂಡಿಲ್ಲ’ ಎಂದು ಕಾಂಗ್ರೆಸ್‌ನ ಸ್ಟಾರ್ ಪ್ರಚಾರಕರೂ ಆಗಿರುವ ಮಹಾರಾಷ್ಟ್ರ ಮಾಜಿ ಮುಖ್ಯಮಂತ್ರಿ ಅಶೋಕ ಚವ್ಹಾಣ ಹೇಳಿದರು.
ಇಲ್ಲಿ ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ನಾವು ರಾಜ್ಯದಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳ ಗೆಲುವಿಗಾಗಿ ಶ್ರಮಿಸುತ್ತಿದ್ದೇವೆ. ಮತಗಳ ವಿಭಜನೆಯಾಗಿ ಬಿಜೆಪಿಗೆ ಲಾಭವಾಗದಂತೆ ಮಹಾರಾಷ್ಟ್ರ ಏಕೀಕರಣ ಸಮಿತಿ(ಎಂಇಎಸ್) ಸೇರಿದಂತೆ ಜಾತ್ಯತೀತ ಶಕ್ತಿಗಳು ನೋಡಿಕೊಳ್ಳಬೇಕು’ ಎಂದು ಹೇಳಿದರು.
‘ಬೆಳಗಾವಿಗೆ ಬುಧವಾರ ವಿಮಾನದಲ್ಲಿ ಬಂದಿದ್ದ ಮಹಾರಾಷ್ಟ್ರದ ಕಾಂಗ್ರೆಸ್ ನಾಯಕರು ಎಂಇಎಸ್ ವಿರುದ್ಧ ಸ್ಪರ್ಧಿಸಿದ ತಮ್ಮ ಪಕ್ಷದ ಅಭ್ಯರ್ಥಿಗಳಿಗೆ ಅಪಾರ ಪ್ರಮಾಣದಲ್ಲಿ ಹಣ ತಂದಿದ್ದಾರೆ’ ಎಂದು ಶಿವಸೇನಾ ರಾಜ್ಯ ವಕ್ತಾರ ಸಂಜಯ್ ರಾವುತ್ ಮಾಡಿದ ಆರೋಪ ತಳ್ಳಿಹಾಕಿದರು.
ಕಾಂಗ್ರೆಸ್ ತನ್ನ ಚುನಾವಣೆ ಪ್ರಣಾಳಿಕೆಯಲ್ಲಿ ಬಜರಂಗ ದಳ ನಿಷೇಧಗೊಳಿಸುವ ಅಂಶ ಸೇರಿಸಿದ ಬಗ್ಗೆ ಪ್ರತಿಕ್ರಿಯಿಸಿದ ಅಶೋಕ ಚವ್ಹಾಣ, ‘ರಾಜ್ಯದಲ್ಲಿ ಧಾರ್ಮಿಕ ಮೂಲಭೂತವಾದಿ ಮತ್ತು ಭಯೋತ್ಪಾದಕ ಸಂಘಟನೆಗಳನ್ನು ನಿಷೇಧಿಸಲಾಗುವುದು, ಅವುಗಳ ಕಡಿವಾಣಕ್ಕಾಗಿ ವಿಶೇಷ ಪಡೆ ರಚಿಸಲಾಗುವುದು ಎಂದು ಬಿಜೆಪಿ ಸಹ ತನ್ನ ಪ್ರಣಾಳಿಕೆಯಲ್ಲಿ ತಿಳಿಸಿದೆ. ಆದರೆ, ಕಾಂಗ್ರೆಸ್ ಒಂದು ಧಾರ್ಮಿಕ ಮೂಲಭೂತವಾದಿ ಸಂಘಟನೆಯನ್ನು ಹೆಸರಿಸಿದೆ. ನಮಗೂ ಧರ್ಮದಲ್ಲಿ ನಂಬಿಕೆ ಇದೆ. ನಮ್ಮ ಮನೆಯಲ್ಲಿ ಪ್ರಾರ್ಥನೆ ಸಲ್ಲಿಸುತ್ತೇವೆ. ಅದನ್ನು ಸಾರ್ವಜನಿಕವಾಗಿ ಪ್ರದರ್ಶಿಸುವ ಅಗತ್ಯವಿಲ್ಲ. ಚುನಾವಣೆ ಹಿನ್ನೆಲೆಯಲ್ಲಿ ಸಾರ್ವಜನಿಕ ಸ್ಥಳಗಳಲ್ಲಿ ಬಿಜೆಪಿ ನಾಯಕರು ಹನುಮಾನ್ ಚಾಲೀಸಾ ಪಠಿಸುತ್ತಿದ್ದಾರೆ. ಇದನ್ನು ಮೊದಲೇ ಮಾಡಬಹುದಿತ್ತು’ ಎಂದು ತಿರುಗೇಟು ನೀಡಿದರು.
Laxmi News 24×7