Breaking News

ನಾಲಾಯಕ್, ವಿಷಕನ್ಯೆ, ಅರೆಹುಚ್ಚ, ವಿಷಸರ್ಪ..: ಬೈಗುಳ ರಾಜಕೀಯಕ್ಕೆ ಚು.ಆಯೋಗ ಹೇಳಿದ್ದೇನು

Spread the love

ಬೆಂಗಳೂರು: ಚುನಾವಣಾ ರಣಕಣದಲ್ಲಿ ಮತ ಪ್ರಚಾರ ಕಾವೇರುತ್ತಿದೆ. ಎಲ್ಲಾ ಅಭ್ಯರ್ಥಿಗಳು ಬಿರುಸಿನ ಕ್ಯಾಂಪೇನ್‌ನಲ್ಲಿ ತೊಡಗಿದ್ದಾರೆ.

ಜಿದ್ದಾಜಿದ್ದಿನ ಪೈಪೋಟಿಯ ಹೋರಾಟದಲ್ಲಿ ಅಭ್ಯರ್ಥಿಗಳಿಂದ ಪರಸ್ಪರ ವಿವಾದಾತ್ಮಕ ಹೇಳಿಕೆಗಳೂ ಸದ್ದು ಮಾಡುತ್ತಿವೆ. ರಾಜಕಾರಣಿಗಳು ಒಬ್ಬರ ಮೇಲೊಬ್ಬರು ತೀಕ್ಷ್ಣ ಟೀಕೆಗಳನ್ನು ಮಾಡುತ್ತಿದ್ದಾರೆ.‌ ಬಿಜೆಪಿ ಮತ್ತು ಕಾಂಗ್ರೆಸ್ ‌ನಡುವಿನ ಟೀಕಾಸ್ತ್ರಗಳು ಇನ್ನೂ ಜೋರಾಗಿವೆ. ವಿವಾದಿತ ಹೇಳಿಕೆಗಳ ವಿರುದ್ಧ ಚುನಾವಣಾ ಆಯೋಗಕ್ಕೂ ಪರಸ್ಪರ ದೂರುಗಳನ್ನು ದಾಖಲಿಸಲಾಗುತ್ತಿದೆ. ಬಹಿರಂಗ ಪ್ರಚಾರಕ್ಕೆ ಇನ್ನಿರುವುದು ಆರು ದಿನ. ರಾಜಕೀಯ ಪಕ್ಷಗಳ ನಾಯಕರ ಮಾತಿನ ಭರಾಟೆ ಇನ್ನೂ ಹೆಚ್ಚುವ ಸಾಧ್ಯತೆ ಇದೆ.

ಮಲ್ಲಿಕಾರ್ಜುನ ಖರ್ಗೆಯವರ ‘ವಿಷಸರ್ಪ’ ಹೇಳಿಕೆ: ಮೋದಿ ಅಂದ್ರೆ ವಿಷದ ಹಾವಿದ್ದಂತೆ. ವಿಷ ಹೌದೋ, ಇಲ್ಲವೋ ಎಂದು ನೆಕ್ಕಿ ನೋಡಿದರೆ ನೀವು ಸತ್ತಂತೆ ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಪ್ರಧಾನ ಮಂತ್ರಿ ನರೇಂದ್ರ ಮೋದಿ ವಿರುದ್ಧದ ವಾಗ್ದಾಳಿ ಭಾರಿ ಸದ್ದು ಮಾಡಿತ್ತು. ಗದಗದಲ್ಲಿ ನಡೆದ ಕಾಂಗ್ರೆಸ್ ಬಹಿರಂಗ ಸಭೆಯಲ್ಲಿ ಮಾತನಾಡಿದ್ದ ಖರ್ಗೆ, ಮೋದಿ ಬಗ್ಗೆ ಈ ಹೇಳಿಕೆ ನೀಡಿದ್ದರು‌. ಕೂಡಲೇ ಹೇಳಿಕೆ ವಿವಾದದ ಸ್ವರೂಪ ಪಡೆಯಿತು. ಬಿಜೆಪಿ ನಾಯಕರು ಕೆಂಡಾಮಂಡಲರಾದರು. ಬಳಿಕ ಖರ್ಗೆ ವಿಷಾದ ವ್ಯಕ್ತಪಡಿಸಿದರು.

ಸಿದ್ದರಾಮಯ್ಯರ ‘ಲಿಂಗಾಯತ’ ಹೇಳಿಕೆ: ಮಾಜಿ ಸಿಎಂ ಸಿದ್ದರಾಮಯ್ಯರ ಲಿಂಗಾಯತರ ವಿರುದ್ಧದ ಎನ್ನಲಾದ ಹೇಳಿಕೆ ಭಾರಿ ಸದ್ದು ಮಾಡುತ್ತಿದೆ. ಮಾಧ್ಯಮವೊಂದಕ್ಕೆ ಮಾತನಾಡುತ್ತಾ ಸಿದ್ದರಾಮಯ್ಯ, ಲಿಂಗಾಯತ ಸಿಎಂ ಬಗ್ಗೆ ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸುತ್ತಾ, ಅವರೇ ಈಗ ಸಿಎಂ ಇರುವುದು. ಅವರೇ ಎಲ್ಲಾ ಭ್ರಷ್ಟಾಚಾರ ಮಾಡಿ ರಾಜ್ಯವನ್ನು ಹಾಳು ಮಾಡಿರುವುದು ಎಂದಿದ್ದರು. ಈ ಹೇಳಿಕೆ ಇಡೀ ಲಿಂಗಾಯತ ಸಮುದಾಯವನ್ನೇ ಭ್ರಷ್ಟರು ಎಂದು ಸಿದ್ದರಾಮಯ್ಯ ಹೇಳಿದ್ದಾರೆ ಎಂದು ಬಿಂಬಿತವಾಗಿತ್ತು. ಇದೂ ತೀವ್ರ ವಿವಾದಕ್ಕೆ ಕಾರಣವಾಯಿತು. ಚುನಾವಣೆ ಹೊಸ್ತಿಲ್ಲಲ್ಲೇ ಸಿದ್ದರಾಮಯ್ಯರ ಹೇಳಿಕೆಯನ್ನು ಬಿಜೆಪಿ ಅಸ್ತ್ರವಾಗಿ ಬಳಸುತ್ತಿದೆ. ಸಿದ್ದರಾಮಯ್ಯ ಅವರು ನಾನು ಲಿಂಗಾಯತ ಸಮಾಜವನ್ನು ಉದ್ದೇಶಿಸಿ ಆ ಮಾತು ಹೇಳಿರಲಿಲ್ಲ. ಅದು ಸಿಎಂ ಬೊಮ್ಮಾಯಿ ಉದ್ದೇಶಿಸಿ ಹೇಳಿರುವುದು ಎಂದು ಸಮಜಾಯಿಷಿ ನೀಡಿದ್ದರು.‌

ಯತ್ನಾಳ್ ‘ವಿಷಕನ್ಯೆ’ ಕಿಡಿ: ಇತ್ತ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಸೋನಿಯಾ ಗಾಂಧಿಯವರನ್ನು ವಿಷ ಕನ್ಯೆ ಎಂದು ಕರೆದಿರುವುದು ವಿವಾದಕ್ಕೆ ಕಾರಣವಾಯಿತು. ಮೋದಿ ವಿರುದ್ಧ ಮಲ್ಲಿಕಾರ್ಜುನ ಖರ್ಗೆ ವಿಷಸರ್ಪ ಹೇಳಿಕೆಗೆ ತಿರುಗೇಟು ನೀಡುತ್ತಾ ಅವರು ಪ್ರಧಾನಿ ನರೇಂದ್ರ ಮೋದಿ ವಿಷ ಸರ್ಪ ಎಂದು ಹೇಳಿದ್ದೀರಿ. ಹಾಗಾದರೆ, ಕಾಂಗ್ರೆಸ್ ನಾಯಕಿ ಸೋನಿಯಾ ವಿಷಕನ್ಯೆ ಏನು? ಎಂದು ಕೊಪ್ಪಳದಲ್ಲಿ ಪ್ರಚಾರ ಭಾಷಣದ ವೇಳೆ ಹೇಳಿಕೆ ನೀಡಿದ್ದರು. ಈ ಹೇಳಿಕೆಯನ್ನು ಕಾಂಗ್ರೆಸ್ ತೀವ್ರವಾಗಿ ಖಂಡಿಸಿತ್ತು. ಕೂಡಲೇ ಪಿಎಂ, ಸಿಎಂ ಯತ್ನಾಳ್ ಹೇಳಿಕೆಗೆ ಕ್ಷಮೆ ಕೋರಬೇಕು ಎಂದು ಕಾಂಗ್ರೆಸ್ ‌ನಾಯಕರು ಆಗ್ರಹಿಸಿದ್ದರು. ಇತ್ತ ಬಿಜೆಪಿ ಪಕ್ಷ ಯತ್ನಾಳ್ ಹೇಳಿಕೆಯಿಂದ ಅಂತರ ಕಾಯ್ದುಕೊಂಡಿತ್ತು. ಅದು ಅವರ ವೈಯ್ಯಕ್ತಿಕ ಹೇಳಿಕೆ ಅದಕ್ಕೂ ಪಕ್ಷಕ್ಕೂ ಸಂಬಂಧ ಇಲ್ಲ. ಅದು ಬಿಜೆಪಿಯ ಸಂಸ್ಕೃತಿ ಅಲ್ಲ ಎಂದು ಬಿಜೆಪಿ ಯತ್ನಾಳ್ ಹೇಳಿಕೆ ಬಗ್ಗೆ ಅಂತರ ಕಾಯ್ದುಕೊಂಡಿತು.

ಯತ್ನಾಳ್​ರ ರಾಹುಲ್ ‘ಅರೆಹುಚ್ಚ’ ಹೇಳಿಕೆ: ಬಸನಗೌಡ ಯತ್ನಾಳ್ ಮತ್ತೆ ತಮ್ಮ ನಾಲಿಗೆ ಹರಿಬಿಟ್ಟು ರಾಹುಲ್ ಗಾಂಧಿ ಅರೆಹುಚ್ಚ ಎಂಬ ವಿವಾದಿತ ಹೇಳಿಕೆ ನೀಡಿದ್ದರು. ಧಾರವಾಡದಲ್ಲಿ ಮಾಧ್ಯಮದವರ ಜೊತೆ ಮಾತನಾಡುತ್ತಾ, ಆಲೂಗಡ್ಡೆಯಿಂದ ಚಿನ್ನ ತೆಗೀತಿನಿ ಅಂತಾರೆ, ಚೀನಾ ರಾಯಭಾರಿ ಜೊತೆ ಸಭೆ ಮಾಡ್ತಾರೆ, ದೇಶ ದ್ರೋಹಿಗಳು, ವಿರೋಧಿಗಳ ಜೊತೆ ಕೈ ಜೋಡಿಸುತ್ತಾರೆ. ಇವರನ್ನು ಬುದ್ಧಿವಂತ ಅಂತ ಕರೆಯಬೇಕಾ? ರಾಹುಲ್ ಗಾಂಧಿಯನ್ನು ದೊಡ್ಡ ಬುದ್ಧಿವಂತ ಅಂತ ಕರೀಬೇಕಾ? ಹುಚ್ಚ ಅಲ್ಲ ಅರೆ ಹುಚ್ಚ ಎಂದು ಕರೆಯಬೇಕು ಎಂದು ಟೀಕಿಸಿದ್ದರು. ದೇಶದ ಬಗ್ಗೆ ಕಾಳಜಿ ಇಲ್ಲದವರನ್ನು ಅರೆಹುಚ್ಚ ಅನ್ನದೆ ಗ್ರೇಟ್ ಸ್ಕಾಲರ್ ಅನ್ನ ಬೇಕಾ? ಎಂದು ಪ್ರಶ್ನಿಸಿದ್ದರು.‌ ಈ ಹೇಳಿಕೆ ವಿರುದ್ಧ ಕಾಂಗ್ರೆಸ್ ನಾಯಕರು ವಾಗ್ದಾಳಿ ನಡೆಸಿದ್ದರು. ಯತ್ನಾಳ್ ಈ ಹೇಳಿಕೆಯಿಂದಲೂ ಬಿಜೆಪಿ ನಾಯಕರು ಅಂತರ ಕಾಯ್ದುಕೊಂಡಿದ್ದರು.

ಪ್ರಿಯಾಂಕ ಖರ್ಗೆಯ ‘ನಾಲಾಯಕ್’ ವಿವಾದ: ಇತ್ತ ಮಲ್ಲಿಕಾರ್ಜುನ ಖರ್ಗೆ ಪುತ್ರ ಪ್ರಿಯಾಂಕ್ ಖರ್ಗೆ ಕಲಬುರ್ಗಿಯಲ್ಲಿ ಸುದ್ದಿಗೋಷ್ಟಿ ಉದ್ದೇಶಿಸಿ ಮಾತನಾಡುತ್ತಾ, ಪ್ರಧಾನಿ ಮೋದಿ ಮಳಖೇಡಕ್ಕೆ ಬಂದಾಗ ಬಂಜಾರಾ ಸಮಾಜದವರಿಗೆ ಏನು ಹೇಳಿದ್ರು?. ಬಂಜಾರಾ ಸಮಾಜದ ಮಗ ದೆಹಲಿಯಲ್ಲಿದ್ದಾನೆ ಅಂತ ಮೋದಿ ಹೇಳಿದ್ದರು. ಆದರೆ ಇಂತಹ ನಾಲಾಯಕ್ ಮಗ ಇದ್ದರೆ ಹೇಗೆ ನಡೆಯುತ್ತೆ? ದೇಶ ನಡೆಸೋನು ಮಾತ್ರವಲ್ಲ. ಮನೆಯಲ್ಲಿ ಒಬ್ಬ ನಾಲಾಯಕ್ ಮಗನಿದ್ರೂ ಮನೆ ಸುಸೂತ್ರವಾಗಿ ನಡೆಯೋದಿಲ್ಲ ಎಂದು ಪ್ರಿಯಾಂಕ್ ಖರ್ಗೆ ವಾಗ್ದಾಳಿ ನಡೆಸಿದರು. ಬಂಜಾರ ಸಮುದಾಯದ ಹಿತರಕ್ಷಿಸದ ಮಗ ನಾಲಾಯಕ್ ಅಲ್ಲವೇ ಎಂಬ ಈ ಹೇಳಿಕೆ ಭಾರಿ ವಿವಾದ ಸೃಷ್ಟಿಸಿತು. ಬಿಜೆಪಿ ನಾಯಕರು ಪ್ರಿಯಾಂಕ್ ಖರ್ಗೆ ಹೇಳಿಕೆ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದರು. ಇದರಿಂದ ಎಚ್ಚೆತ್ತುಕೊಂಡ ಪ್ರಿಯಾಂಕ್ ಖರ್ಗೆ ಈ ಮಾತು ನಿರ್ದಿಷ್ಟ ವ್ಯಕ್ತಿ ಕುರಿತು ಆಡಿದ್ದಲ್ಲ. ನಾನೂ ಆ ಸಮುದಾಯದ ಕೆಲಸ ಮಾಡದಿದ್ದರೆ ನಾಲಾಯಕ್ ಆಗುತ್ತೇನೆ ಎಂದು ಸಮಜಾಯಿಶಿ ನೀಡಿದರು.

ಕೆ.ಎಸ್.ಈಶ್ವರಪ್ಪರ ವಿವಾದಿತ ಹೇಳಿಕೆ: ಕೆ.ಎಸ್.ಈಶ್ವರಪ್ಪ ಮುಸ್ಲಿಂ ಮತ ನಮಗೆ ಬೇಡ ಎಂದು ಹೇಳುವ ಮೂಲಕ ವಿವಾದಿತ ಹೇಳಿಕೆ ನೀಡಿದ್ದರು. ಶಿವಮೊಗ್ಗದ ವಿನೋಬಾ ನಗರದಲ್ಲಿರುವ ಯಡಿಯೂರಪ್ಪ ನಿವಾಸದಲ್ಲಿ ವೀರಶೈವ-ಲಿಂಗಾಯತ ಸಮಾಜದ ಸ್ನೇಹ ಮಿಲನ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಬಿಜೆಪಿಗೆ ಶಿವಮೊಗ್ಗದಲ್ಲಿ ಮುಸ್ಲಿಂ ವೋಟ್ ಬೇಡ ಎಂದಿದ್ದರು.

ಚುನಾವಣಾ ಆಯೋಗದ ಕಿವಿಮಾತು: ಚುನಾವಣಾ ಅಖಾಡದಲ್ಲಿ ರಾಜಕೀಯ ಪಕ್ಷಗಳಿಂದ ಪರಸ್ಪರ ನಿಂದನೆ ಟೀಕೆಗಳು ಹೆಚ್ಚಾಗುತ್ತಿರುವುದನ್ನು ಗಂಭೀರವಾಗಿ ತೆಗೆದುಕೊಂಡಿರುವ ಚುನಾವಣಾ ಆಯೋಗ, ರಾಜಕೀಯ ಪಕ್ಷಗಳಿಗೆ ಕಿವಿಮಾತು ಹೇಳಿದೆ. ಪ್ರಚಾರದ ವೇಳೆ ಎಲ್ಲ ಪಕ್ಷಗಳ ನಾಯಕರು ಮತ್ತು ಅಭ್ಯರ್ಥಿಗಳು ಎಚ್ಚರಿಕೆ ಹಾಗೂ ಸಂಯಮದಿಂದ ಹೇಳಿಕೆಗಳನ್ನು ನೀಡಬೇಕು ಎಂದು ಸಲಹೆ ನೀಡಿದೆ. ಪಕ್ಷಗಳ ಸ್ಟಾರ್ ಪ್ರಚಾರಕರೇ ಇಂತಹ ಹೇಳಿಕೆಗಳನ್ನು ನೀಡುತ್ತಿರುವುದು ಗಮನಕ್ಕೆ ಬಂದಿದೆ. ಈ ಕುರಿತು ದೂರುಗಳು ಬಂದಿವೆ. ಮಾಧ್ಯಮಗಳಲ್ಲಿ ವರದಿಗಳು ‍ಪ್ರಕಟವಾಗಿವೆ. ಪಕ್ಷಗಳ ಸ್ಟಾರ್ ಪ್ರಚಾರಕರು ಹಾಗೂ ಅಭ್ಯರ್ಥಿಗಳು ವಿಷಯ ಆಧಾರಿತ ಚರ್ಚೆಗಳನ್ನು ಮಾಡಬೇಕು. ಬದಲಿಗೆ ವೈಯಕ್ತಿಕ ಟೀಕೆಗಳ ಮೂಲಕ ಚುನಾವಣಾ ವಾತಾವರಣವನ್ನು ಹಾಳು ಮಾಡಬಾರದು ಎಂದು ಹೇಳಿದೆ.


Spread the love

About Laxminews 24x7

Check Also

ಮೃತ ಸರ್ಕಾರಿ ವೈದ್ಯಾಧಿಕಾರಿ ಕೊಠಡಿಯಲ್ಲಿ ಮಾಟಮಂತ್ರ: ಸಾವಿನ ಸುತ್ತ ಅನುಮಾನದ ಹುತ್ತ

Spread the loveಕೋಲಾರ, ಜುಲೈ 07: ಜಿಲ್ಲೆ ಮಾಲೂರು ತಾಲ್ಲೂಕಿನ ಆಸ್ಪತ್ರೆಯ ವೈದ್ಯಾಧಿಕಾರಿ ಡಾ.ವಸಂತ್ ಕುಮಾರ್ ಅವರು ತಮ್ಮ ಉತ್ತಮ ಸೇವೆಯಿಂದಲೇ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ