Breaking News

ನನ್ನ ಸೋಲಿಸಲು ಕಾರ್ಯಕರ್ತರ ಮೇಲೆ ಭಾಜಪ ಒತ್ತಡ: ಶೆಟ್ಟರ

Spread the love

ಹುಬ್ಬಳ್ಳಿ: ರಾಜಕಾರಣದಲ್ಲಿ ಒಳ ಮತ್ತು ಹೊರ ಹೊಡೆತಗಳಿವೆ. ಇದೀಗ ಬಿಜೆಪಿಯವರು ನನ್ನನ್ನು ಸೋಲಿಸಲು ಕಾರ್ಯಕರ್ತರ ಮೇಲೆ ಒತ್ತಡ ತರುತ್ತಿದ್ದಾರೆ. ಇದರಿಂದ ತಾಳ್ಮೆಯ ಕಟ್ಟೆ ಒಡೆದು ಹೋಗುತ್ತಿದ್ದು, ಇದರ ಪರಿಣಾಮ ಮುಂದಿನ ಲೋಕಸಭಾ ಚುನಾವಣೆ ಮೇಲೆ ಬೀರುತ್ತದೆ ಕಾದುನೋಡಿ ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಹು-ಧಾ ಕೇಂದ್ರ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್‌ ಅಭ್ಯರ್ಥಿ ಜಗದೀಶ ಶೆಟ್ಟರ ಹೇಳಿದರು.

 

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹು-ಧಾ ಕೇಂದ್ರ ವಿಧಾನಸಭಾ ಕ್ಷೇತ್ರದಲ್ಲಿ ನನ್ನ ವರ್ಚಸ್ಸು ಕಡಿಮೆಯಾಗಿಲ್ಲ. ಒಂದು ಕಪ್ಪುಚುಕ್ಕೆ ಇಲ್ಲದ ರಾಜಕಾರಣ ಮಾಡಿದ್ದೇನೆ. ಏನೂ ತಪ್ಪು ಮಾಡದವರಿಗೆ ಟಿಕೆಟ್‌ ಕೈ ತಪ್ಪಿಸಿದ್ದಾರೆಂಬ ಅನುಕಂಪ ಇದೆ. ಜನರ ಕರುಣೆ, ಬೇಸರವು ನನ್ನನ್ನು ಶಾಸಕನಾಗಿ ಆರಿಸಿ ತರಬೇಕೆಂಬ ಛಲಕ್ಕೆ ಕಾರಣವಾಗಿದೆ. ಹಿಂದಿನ ಚುನಾವಣೆಗಿಂತ ಈ ಬಾರಿ ಅತಿಹೆಚ್ಚು ಮತಗಳನ್ನು ಪಡೆದು ಆರಿಸಿ ಬರುತ್ತೇನೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಬಿಜೆಪಿ ಪದಾಧಿಕಾರಿಗಳ ಉಚ್ಛಾಟನೆ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ಅವರೆಲ್ಲ ಮೊದಲೇ ಬಿಜೆಪಿಗೆ ರಾಜೀನಾಮೆ ನೀಡಿದ್ದಾರೆ. ಅವರನ್ನು ಪುನಃ ಉಚ್ಛಾಟನೆ ಮಾಡಿರುವುದು ಹಾಸ್ಯಾಸ್ಪದ. ಇದೀಗ ಕಾರ್ಯಕರ್ತರ ಮೇಲೆ ಒತ್ತಡ ತರುವ ಕೆಲಸ ಬಿಜೆಪಿಯವರು ಮಾಡುತ್ತಿದ್ದಾರೆ. ಇದು ಬಹಳ ದಿನ ನಡೆಯುವುದಿಲ್ಲ. ಅಮಿತ್‌ ಶಾ ಹೇಳಲಿ ಯಾರೇ ಹೇಳಲಿ ಬಿಜೆಪಿ ಅಭ್ಯರ್ಥಿಗಿಂತ ಅತಿಹೆಚ್ಚು ಮತಗಳಿಂದ ಗೆದ್ದು ಬರುತ್ತೇನೆ ಎಂದರು.

ತಮ್ಮ ವಿರುದ್ಧ ಕೇಂದ್ರ ಸಚಿವರು ಭರ್ಜರಿ ಕ್ಯಾಂಪೇನ್‌ ಮಾಡುತ್ತಿದ್ದು, ಈ ಹಿಂದೆ ಅವರ ಪರ ಕ್ಯಾಂಪೇನ್‌ನಲ್ಲಿ ತಾವು ಭಾಗಿಯಾಗಿದ್ದರಲ್ಲ ಎಂದು ಪ್ರಶ್ನಿಸಿದಾಗ, ಮುಂದೆ ಲೋಕಸಭಾ ಚುನಾವಣೆ ಬರುತ್ತದೆ ಕಾದುನೋಡಿ ಎಂದಷ್ಟೆ ಹೇಳಿದರು.

ವಿತಂಡ ವಾದ ಸರಿಯಲ್ಲ: ಬೊಮ್ಮಾಯಿ ಕ್ಯಾಬಿನೆಟ್‌ನಲ್ಲಿ ಮಂತ್ರಿ ಸ್ಥಾನ ಬೇಡ ಎಂದಿದ್ದಕ್ಕೆ ಟಿಕೆಟ್‌ ಕೊಡಲಿಲ್ಲ ಎಂಬ ಅಮಿತ್‌ ಶಾ ಹೇಳಿಕೆಗೆ ಪ್ರತಿಕ್ರಿಯಿಸಿ ಶೆಟ್ಟರ, ಸಚಿವ ಸಂಪುಟದಲ್ಲಿ ಮಂತ್ರಿ ಆಗಲಿಲ್ಲ ಎಂದರೆ ಎಂಎಲ್‌ಎ ಟಿಕೆಟ್‌ ಕೊಡುವುದಿಲ್ಲ ಎಂಬುದು ಸರಿಯಲ್ಲ. ಇದು ವಿಚಿತ್ರ ಹೇಳಿಕೆ. ನಾನು ಅಧಿಕಾರ ಬೇಡವೆಂದು ಸುಮ್ಮನೆ ಮನೆಯಲ್ಲಿ ಕುಳಿತರೆ ಅದನ್ನು ಗುರುತು ಮಾಡಬೇಕಿತ್ತು. ಅದು ಬಿಟ್ಟು ಕ್ಯಾಬಿನೆಟ್‌ ಸ್ಥಾನ ಬೇಡ ಎಂದಾಗ ಟಿಕೆಟ್‌ ಕೊಡುವುದಿಲ್ಲ ಎಂದಿದ್ದರೆ ಅಥವಾ ಚುನಾವಣೆಗೂ ಮೂರ್‍ನಾಲ್ಕು ತಿಂಗಳ ಮುಂಚೆಯೇ ಟಿಕೆಟ್‌ ಕೊಡುವುದಿಲ್ಲ ಎಂದು ಹೇಳಿದ್ದರೆ ಆಗಲೇ ಮುಗಿದು ಹೋಗುತ್ತಿತ್ತು. ಅದು ಬಿಟ್ಟು ಈಗ ವಿತಂಡ ವಾದ ಸರಿಯಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಇಷ್ಟು ದಿನ ಪ್ರಹ್ಲಾದ ಜೋಶಿ ಯಾವತ್ತೂ ಈ ಕ್ಷೇತ್ರದಲ್ಲಿ ಇಷ್ಟೊಂದು ಕ್ಯಾಂಪೇನ್‌ ಮಾಡಿರಲಿಲ್ಲ. ಅವರ ಮೇಲೆ ಕೇಂದ್ರದ ಒತ್ತಡ ಇದ್ದೇ ಇದೆ. ಅದನ್ನು ಅವರು ಬೇರೆಯವರ ಮೇಲೆ ಹಾಕಲು ಮುಂದಾಗುತ್ತಿದ್ದಾರೆ. ಸೋಲುವ ಭಯದಲ್ಲಿ ಜನರಿಗೆ ಹೆದರಿಕೆ, ದಬ್ಟಾಳಿಕೆ ಮಾಡುವುದು ಪ್ರಾರಂಭವಾಗಿದೆ. ನನ್ನ ಜೀವನದಲ್ಲಿಯೇ ಈ ತರಹದ ಪರಿಸ್ಥಿತಿ ನೋಡಿರಲಿಲ್ಲ. ಈ ಚುನಾವಣೆ ಶೆಟ್ಟರ ವರ್ಸಸ್‌ ಬಿಜೆಪಿ ಹೈಕಮಾಂಡ್‌ ಅಲ್ಲ. ಕಾಂಗ್ರೆಸ್‌ ವರ್ಸಸ್‌ ಬಿಜೆಪಿ ಅಷ್ಟೆ. -ಜಗದೀಶ ಶೆಟ್ಟರ, ಹು-ಧಾ


Spread the love

About Laxminews 24x7

Check Also

ಮೈಸೂರಿನಿಂದ ಉದಯಪುರಕ್ಕೆ ತೆರಳುತ್ತಿದ್ದ ರೈಲಿನ ಇಂಜಿನ್​ನಲ್ಲಿ ಬೆಂಕಿ ಕಾಣಿಸಿಕೊಂಡು ಆತಂಕ ಸೃಷ್ಟಿಯಾಗಿತ್ತು.

Spread the loveರಾಮನಗರ: ಬೊಂಬೆನಗರಿ ಚನ್ನಪಟ್ಟಣದ ಬಳಿ ಚಲಿಸುತ್ತಿದ್ದ ರೈಲಿನ ಇಂಜಿನ್​​ನಲ್ಲಿ ಆಕಸ್ಮಿಕವಾಗಿ ಬೆಂಕಿ ಕಾಣಿಸಿಕೊಂಡ ಘಟನೆ ಇಂದು (ಗುರುವಾರ) ನಡೆದಿದೆ. …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ