ಚೆನ್ನೈ: ನಿತ್ಯದ ಕೆಲಸದ ಅವಧಿಯನ್ನು 12 ಗಂಟೆವರೆಗೆ ವಿಸ್ತರಿಸಲು ಅವಕಾಶವಿದ್ದ ‘ಕಾರ್ಖಾನೆಗಳ (ತಿದ್ದುಪಡಿ) ಕಾಯ್ದೆ 2023’ ಅನ್ನು ತಮಿಳುನಾಡು ಸರ್ಕಾರ ಹಿಂಪಡೆದಿದೆ. ‘ಕಾರ್ಮಿಕರ ಹಿತಾಸಕ್ತಿಯ ರಕ್ಷಣೆ ದೃಷ್ಟಿಯಿಂದ ಈ ನಿರ್ಧಾರ ಕೈಗೊಳ್ಳಲಾಗಿದೆ’ ಎಂದು ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್ ಹೇಳಿದ್ದಾರೆ.
‘ಸುಧಾರಣೆ ತರುವುದಕ್ಕಷ್ಟೇ ಅಲ್ಲ. ವಿಷಯ ಕುರಿತ ಜನಾಭಿಪ್ರಾಯದ ನಿಲುವು ಒಪ್ಪಿಕೊಳ್ಳಲೂ ಧೈರ್ಯ ಇರಬೇಕು’ ಎಂದು ಹೇಳಿದರು. ಈ ಕಾಯ್ದೆಗೆ ಹಲವು ಕಾರ್ಮಿಕ ಸಂಘಟನೆಗಳು ವಿರೋಧ ವ್ಯಕ್ತಪಡಿಸಿದ್ದವು.
ಸೋಮವಾರ ನಡೆದ ಕಾರ್ಮಿಕ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ‘ಉಲ್ಲೇಖಿತ ಕಾಯ್ದೆಯ ಅನುಸಾರ ಕಾರ್ಖಾನೆಗಳಲ್ಲಿ ನಿತ್ಯ ಈಗಿನ 8 ಗಂಟೆ ಬದಲಾಗಿ 12 ಗಂಟೆವರೆಗೂ ಕೆಲಸದ ಅವಧಿ ನಿಗದಿಪಡಿಸಲು ಅವಕಾಶವಿತ್ತು’ ಎಂದು ಹೇಳಿದರು.
‘ಕಾಯ್ದೆ ವಾಪಸು ಪಡೆಯುವುದನ್ನು ನಾನು ಅಪಮಾನ ಎಂದು ಭಾವಿಸುವುದಿಲ್ಲ. ನಿಜವಾಗಿ ಇದು ಹೆಮ್ಮೆಯ ವಿಷಯ. ಕಾಯ್ದೆಯನ್ನು ರೂಪಿಸುವುದಷ್ಟೇ ಅಲ್ಲ, ಅದನ್ನು ವಾಪಸು ಪಡೆಯಲೂ ಧೈರ್ಯ ಬೇಕು. ಮಾಜಿ ಮುಖ್ಯಮಂತ್ರಿ ಎಂ.ಕರುಣಾನಿಧಿ ನಮಗೆ ಆ ರೀತಿಯ ಮಾರ್ಗದರ್ಶನ ಮಾಡಿದ್ದಾರೆ. ಕಾರ್ಮಿಕ ಸಂಘಟನೆಗಳಿಂದ ಆಕ್ಷೇಪ ವ್ಯಕ್ತವಾದ ಎರಡು ದಿನದಲ್ಲಿಯೇ ಅದನ್ನು ಹಿಂಪಡೆಯಲಾಗಿದೆ’ ಎಂದು ಸ್ಟಾಲಿನ್ ತಿಳಿಸಿದರು.