ಕೋಲಾರ: ಚಿನ್ನದ ಗಣಿಯಲ್ಲಿ ಚಿನ್ನ ಕಳ್ಳತನಕ್ಕೆಂದು ತೆರಳಿದ್ದ ಐವರಲ್ಲಿ ಮೂವರು ಮೃತಪಟ್ಟಿದ್ದು, ಇಬ್ಬರನ್ನ ಬಂಧಿಸಿರುವ ಘಟನೆ ಕೋಲಾರದಲ್ಲಿ ಜರುಗಿದೆ.
ಕೋಲಾರ ಜಿಲ್ಲೆ ಕೆಜಿಎಫ್ ನಗರದ ಮಾರಿಕುಪ್ಪಂನ ಮೈಸೂರು ಮೈನಿಂಗ್ ನಲ್ಲಿ ಈ ಘಟನೆ ಜರುಗಿದ್ದು, ಮೂವರು ಕಳ್ಳರು ಮೃತಪಟ್ಟಿದ್ದಾರೆ. ಕಳೆದ ರಾತ್ರಿ ಕೆಜಿಎಫ್ ನ ಐವರು ನಿವಾಸಿಗಳು ಚಿನ್ನದ ಗಣಿಯಲ್ಲಿ ಚಿನ್ನ ಕಳ್ಳತನಕ್ಕೆಂದು ತೆರಳಿದ್ದರು. ಚಿನ್ನದ ಗಣಿಯ ಗುಂಡಿಯಲ್ಲಿ ಬಿದ್ದು ಮೂವರು ಸಾವನ್ನಪ್ಪಿದ್ದಾರೆ.
ಮೃತರನ್ನು ಕೆಜಿಎಫ್ ನಗರದ ಬಿ-ಶಾಪ್ ನ ದೊಡ್ಡಿಯ ನಿವಾಸಿಗಳಾದ ಪಾಡಿಯಪ್ಪ, ಜೊಸೆಫ್, ಕಂದ ಎಂದು ಗುರುತಿಸಲಾಗಿದೆ. ವಿಕ್ಟರ್ ಹಾಗೂ ಕಾರ್ತಿಕ್ ಎಂಬವರನ್ನ ಬಂಧಿಸಲಾಗಿದೆ. ಸ್ಥಳಕ್ಕೆ ಮಾರಿಕುಪ್ಪಂ ಠಾಣಾ ಪೊಲೀಸರು ಹಾಗೂ ಅಗ್ನಿಶಾಮಕ ದಳದ ಸಿಬ್ಬಂದಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಅಲ್ಲದೆ ಕಳೆದ ರಾತ್ರಿಯಿಂದ ಮೃತದೇಹಗಳಿಗೆ ಶೋಧ ಕಾರ್ಯ ಆರಂಭಿಸುತ್ತಿದ್ದು, ಕಂದ ಹಾಗೂ ಜೋಸೆಫ್ ಎಂಬವರ ಮೃತ ದೇಹಗಳು ಸಿಕ್ಕಿದೆ. ಜೊತೆಗೆ ಪಾಡಿಯಪ್ಪ ಎಂಬವರ ಮೃತ ದೇಹಕ್ಕಾಗಿ ಶೋಧ ಕಾರ್ಯ ಮುಂದುವರಿದಿದೆ. ಸುಮಾರು ಸಾವಿರಾರು ಅಡಿ ಆಳವಿರುವ ಗಣಿ ಗುಂಡಿಯಲ್ಲಿ ಕಳೆದ ರಾತ್ರಿ ಕಳ್ಳತನಕ್ಕೆಂದು ಒಳಹೊಕ್ಕಿರುವ ಕಳ್ಳರು, ಕಾಲು ಜಾರಿ ಅಥವಾ ಉಸಿರುಗಟ್ಟಿ ಗುಂಡಿಯಲ್ಲಿ ಬಿದ್ದು ಮೃತಪಟ್ಟಿದ್ದಾರೆ ಎನ್ನಲಾಗಿದೆ.
ಈ ಸಂಬಂದ ಪ್ರಕರಣ ದಾಖಲು ಮಾಡಿಕೊಂಡಿರುವ ಕೆಜಿಎಫ್ ಪೊಲೀಸರು ತನಿಖೆ ಕೈಗೊಂಡಿದ್ದಾರೆ.