ಬೆಂಗಳೂರು: ನೆಲಮಂಗಲದಲ್ಲಿ ಬಿಜೆಪಿ ಅಭ್ಯರ್ಥಿ ಸಪ್ತಗಿರಿ ಶಂಕರ್ ಪರ ಸಿಎಂ ಬಸವರಾಜ್ ಬೊಮ್ಮಾಯಿ ಚುನಾವಣಾ ಪ್ರಚಾರ ಮಾಡುತ್ತಿದ್ದ ವೇಳೆ ವ್ಯಕ್ತಿಯೋರ್ವ ಸರ್ಕಾರ ಹಾಗೂ ಮುಖ್ಯಮಂತ್ರಿಗಳನ್ನು ತರಾಟೆಗೆ ತೆಗೆದುಕೊಂಡ ಘಟನೆ ನಡೆದಿದೆ.
ಬಿಜೆಪಿ ಅಭ್ಯರ್ಥಿ ಸಪ್ತಗಿರಿ ಶಂಕರ್ ಪರ ಸಿಎಂ ಬಸವರಾಜ್ ಬೊಮ್ಮಾಯಿ ಮತಯಾಚಿಸಿದ್ದು, ನೆಲಮಂಗಲದ ಐಬಿಯಿಂದ ನಡೆದ ರೊಡ್ ಶೋ ನಲ್ಲಿ ಸಿಎಂ ಭಾಗಿಯಾಗಿದ್ದಾರೆ. ಈ ವೇಳೆ ವ್ಯಕ್ತಿಯೋರ್ವ ಸರ್ಕಾರದ ವಿರುದ್ಧ ಹಿಗ್ಗಾ ಮುಗ್ಗಾ ವಾಗ್ದಾಳಿ ನಡೆಸಿದ್ದಾನೆ.
ಗ್ಯಾಸ್ ಬೆಲೆ ಏರಿಕೆಯಾಗಿದೆ, ಅಗತ್ಯ ವಸ್ತುಗಳ ಬೆಲೆ ಏರಿಕೆಯಾಗಿದೆ. ನಾವು ಬಡವರು ಆದರೂ ವೋಟ್ ಹಾಕೋದು ನಮ್ಮ ಹಕ್ಕು ವೋಟ್ ಹಾಕ್ತೀವಿ. ಆದರೆ ಇವರು ಯಾರಿಗೆ ಸಿಎಂ? ಎಂದು ವ್ಯಕ್ತಿ ಕಿಡಿಕಾರಿದ್ದಾನೆ. ಈ ವೇಳೆ ಸ್ಥಳದಲ್ಲಿದ್ದ ಪೊಲೀಸರು ವ್ಯಕ್ತಿಯನ್ನು ಸಮಾಧಾನಪಡಿಸಲು ಯತ್ನಿಸಿದ್ದಾರೆ. ಇದ್ಯಾವುದಕ್ಕೂ ಬಗ್ಗದ ಆತ ಸಿಎಂ ವಿರುದ್ಧ ಕೂಗಾಡಿದ್ದಾನೆ. ಪೊಲೀಸರು ಆತನನ್ನು ನಿಯಂತ್ರಿಸಲು ಹರಸಾಹಸ ಪಟ್ಟ ಘಟನೆ ನಡೆದಿದೆ.
Laxmi News 24×7