ಉಡುಪಿ: ಕಾರ್ಕಳ ವಿಧಾನಸಭಾ ಕ್ಷೇತ್ರದಿಂದ ಪಕ್ಷೇತರ ಅಭ್ಯರ್ಥಿಯಾಗಿ ಶ್ರೀರಾಮಸೇನೆಯ ಮುಖ್ಯಸ್ಥ ಪ್ರಮೋದ ಮುತಾಲಿಕ್ ನಾಮಪತ್ರ ಸಲ್ಲಿಸಿದರು.
ಚುನಾವಣಾ ಆಯೋಗಕ್ಕೆ ಸಲ್ಲಿಸಿರುವ ಆಸ್ತಿ ವಿವರದ ಪ್ರಕಾರ ಪ್ರಮೋದ ಮುತಾಲಿಕ್ ಕೈಯಲ್ಲಿ ₹10,500 ನಗದು, ಖಾತೆಯಲ್ಲಿ ₹3,000 ಹಾಗೂ ಅಂಚೆ ಇಲಾಖೆಯ ಎನ್‌ಎಸ್‌ಸಿ ಬಾಂಡ್‌ನಲ್ಲಿ ₹2.50 ಲಕ್ಷ ಠೇವಣಿ ಸೇರಿ ₹2.63 ಲಕ್ಷ ಹಣ ಹೊಂದಿದ್ದಾರೆ.
ಇದರ ಹೊರತಾಗಿ ಯಾವುದೇ ಆಸ್ತಿ, ಸ್ವಂತ ವಾಹನ ಇಲ್ಲ. ಹಾಗೆಯೇ ಸಾಲವನ್ನೂ ಮಾಡಿಲ್ಲ. ಅವಿವಾಹಿತರಾಗಿರುವ ಮುತಾಲಿಕ್ ಅವರು, ಜನರು ಕೊಟ್ಟ ದೇಣಿಗೆಯೇ ಆದಾಯದ ಮೂಲ ಎಂದು ತಿಳಿಸಿದ್ದಾರೆ.
ಪ್ರಕರಣಗಳು: ಪ್ರಮೋದ ಮುತಾಲಿಕ್ ಮೇಲೆ ಯಾದಗರಿ ನಗರ, ಶೃಂಗೇರಿ, ಬೆಂಗಳೂರು ಹೈಗ್ರೌಂಡ್ ಠಾಣೆ, ಬಬಲೇಶ್ವರ, ನವನಗರ, ಜೇವರ್ಗಿ, ಮುರುಡೇಶ್ವರ ಠಾಣೆಗಳಲ್ಲಿ ಒಟ್ಟು 7 ಅಪರಾಧ ಪ್ರಕರಣಗಳು ಇವೆ.
ಪ್ರಚೋದನಾಕಾರಿ ಭಾಷಣ, ಶಸ್ತ್ರಾಸ್ತ್ರ ಕಾಯ್ದೆ ಉಲ್ಲಂಘನೆ, ಮಾನನಷ್ಟ ಮೊಕದ್ದಮೆ, ಜೀವ ಬೆದರಿಕೆ, ಧಾರ್ಮಿಕ ಭಾವನೆಗೆ ಧಕ್ಕೆ, ಅವಾಚ್ಯ ಶಬ್ದಗಳಿಂದ ನಿಂದನೆ, ಕೋಮುಗಲಭೆಯ ಆರೋಪಗಳು ಸಹ ಮುತಾಲಿಕ್ ಮೇಲಿವೆ.