ಕೊಪ್ಪಳ, ಏಪ್ರಿಲ್ 16; ಕರ್ನಾಟಕದ ವಿಧಾನಸಭೆ ಚುನಾವಣೆಯಲ್ಲಿ ಕುತೂಹಲಕ್ಕೆ ಕಾರಣವಾಗಿರುವುದು ಮಾಜಿ ಸಚಿವ ಜನಾರ್ದನ ರೆಡ್ಡಿ. ಕಲ್ಯಾಣ ರಾಜ್ಯ ಪ್ರಗತಿ ಪಕ್ಷ ಸ್ಥಾಪನೆ ಮಾಡಿ ಅವರು ಮೇ 10ರಂದು ನಡೆಯುವ ವಿಧಾನಸಭಾ ಚುನಾವಣಾ ಕಣಕ್ಕೆ ಧುಮುಕಿದ್ದಾರೆ. ಅವರು ಕೊಪ್ಪಳ ಜಿಲ್ಲೆಯ ಗಂಗಾವತಿ ಕ್ಷೇತ್ರದಿಂದ ಪಕ್ಷದ ಅಭ್ಯರ್ಥಿಯಾಗಿದ್ದಾರೆ.
ಈ ಬಾರಿಯ ಚುನಾವಣೆಯಲ್ಲಿ ಗಂಗಾವತಿ ಕ್ಷೇತ್ರಕ್ಕೆ ಬಿಜೆಪಿ ಹಾಲಿ ಶಾಸಕ ಪರಣ್ಣ ಮುನವಳ್ಳಿ, ಕಾಂಗ್ರೆಸ್ ಪಕ್ಷ ಇಕ್ಬಾಲ್ ಅನ್ಸಾರಿ, ಜೆಡಿಎಸ್ ಪಕ್ಷ ಹೆಚ್. ಆರ್. ಚನ್ನಕೇಶವ ಅಭ್ಯರ್ಥಿಗಳು ಎಂದು ಘೋಷಣೆ ಮಾಡಿದೆ. ಇವೆರೆಲ್ಲರಿಗೂ ಮಾಜಿ ಸಚಿವಜನಾರ್ದನ ರೆಡ್ಡಿಕಲ್ಯಾಣ ರಾಜ್ಯ ಪಗ್ರತಿ ಪಕ್ಷದಿಂದ ಎದುರಾಳಿ. ಆದ್ದರಿಂದ ಚುನಾವಣೆ ಕುತೂಹಲಕ್ಕೆ ಕಾರಣವಾಗಿದೆ.
2022ರ ಡಿಸೆಂಬರ್ 25ರಂದು ಕಲ್ಯಾಣ ರಾಜ್ಯ ಪ್ರಗತಿ ಪಕ್ಷ ಸ್ಥಾಪನೆ ಮಾಡಿದ ಜನಾರ್ದನ ರೆಡ್ಡಿ ಗಂಗಾವತಿ ಕ್ಷೇತ್ರದಿಂದ ಕಣಕ್ಕಿಳಿಯುತ್ತೇನೆ ಎಂದು ಘೋಷಣೆ ಮಾಡಿದರು. ಅಲ್ಲದೇ ಪ್ರಚಾರ ಕಾರ್ಯವನ್ನು ಆರಂಭಿಸಿದರು. ಆದರೆ ಈಗ ಚುನಾವಣಾ ದಿನಾಂಕ ಘೋಷಣೆ ಮಾಡಿದ ಮೇಲೆ ಚಿತ್ರಣ ಬದಲಾಗಿದೆ. ಗಂಗಾವತಿಯಲ್ಲಿ ಗೆಲುವು ಅಂದುಕೊಂಡಷ್ಟು ಸುಲಭವಲ್ಲ ಎಂಬುದು ತಿಳಿದುಬರುತ್ತಿದೆ.
ಕಲ್ಯಾಣ ರಾಜ್ಯ ಪಗ್ರತಿ ಪಕ್ಷದ ಜನಾರ್ದನ ರೆಡ್ಡಿ ಬಿಜೆಪಿಯ ಪರಣ್ಣ ಮುನವಳ್ಳಿ, ಕಾಂಗ್ರೆಸ್ ಪಕ್ಷದ ಇಕ್ಬಾಲ್ ಅನ್ಸಾರಿ ಅವರಿಂದ ಪ್ರಬಲ ಪೈಪೋಟಿ ಎದುರಿಸುತ್ತಿದ್ದಾರೆ. ಗ್ರಾಮೀಣ ಭಾಗದಲ್ಲಿ ಎರಡೂ ರಾಷ್ಟ್ರೀಯ ಪಕ್ಷಗಳು ಪ್ರಬಲವಾಗಿದ್ದು, ಗೆಲುವು ಅಂದುಕೊಂಡಷ್ಟು ಸುಲಭವಿಲ್ಲ ಎಂಬುದು ಸಾಬೀತಾಗುತ್ತಿದೆ. ಜನಾರ್ದನ ರೆಡ್ಡಿ ಕೇವಲ ಗಂಗಾವತಿಗೆ ಸೀಮಿತವಾಗಿ ಉಳಿಯಲು ಆಗಲ್ಲ. ಅವರು ರಾಜ್ಯದ ಇತರ ಅಭ್ಯರ್ಥಿಗಳ ಪರವಾಗಿಯೂ ಪ್ರಚಾರ ಮಾಡಬೇಕಿದೆ.
ಮತಗಳಿಕೆ ಲೆಕ್ಕಾಚಾರಗಳು ಗಂಗಾವತಿ ಕ್ಷೇತ್ರದಲ್ಲಿ ಸುಮಾರು 40 ಸಾವಿರ ಮುಸ್ಲಿಂ ಮತಗಳು ಇವೆ. ಕುರುಬ 20 ಸಾವಿರ, ಕ್ರಿಶ್ಚಿಯನ್ 10 ಸಾವಿರ ಮತದಾರರು ಇದ್ದಾರೆ. ಕಾಂಗ್ರೆಸ್ ಪಕ್ಷ ಇಕ್ಬಾಲ್ ಅನ್ಸಾರಿ ಅಭ್ಯರ್ಥಿ ಎಂದು ಘೋಷಣೆ ಮಾಡುವ ಮೂಲಕ ಮುಸ್ಲಿಂ ದಾಳ ಉರುಳಿಸಿದೆ. ತಮ್ಮ ಆಪ್ತ ಅಲಿಖಾನ್ ಮೂಲಕ ಮುಸ್ಲಿಂ ಸಮುದಾಯದ ಮತಗಳನ್ನು ಸೆಳೆಯುವ ಜನಾರ್ದನ ರೆಡ್ಡಿ ಲೆಕ್ಕಾಚಾರ ಫಲ ಕೊಡುತ್ತಿಲ್ಲ. ಅಲಿಖಾನ್ ಮುಸ್ಲಿಂ ಸಮುದಾಯದ ಪ್ರದೇಶಗಳಿಗೆ ಪ್ರಚಾರಕ್ಕೆ ಬರದಂತೆ ತಡೆಯಲಾಗುತ್ತಿದೆ. ಇದು ನಿಜಕ್ಕೂ ಜನಾರ್ಧನ ರೆಡ್ಡಿ ಆತಂಕ ಉಂಟು ಮಾಡಿದೆ.
2004 ರಿಂದ 2013ರ ತನಕ ಮೂರು ಬಾರಿ ಜೆಡಿಎಸ್‌ನಿಂದ ಸ್ಪರ್ಧಿಸಿದ್ದ ಇಕ್ಬಾಲ್ ಅನ್ಸಾರಿ ಎರಡು ಬಾರಿ ಗೆದ್ದಿದ್ದಾರೆ. 2018ರಲ್ಲಿ ಕಾಂಗ್ರೆಸ್‌ನಿಂದ ಕಣಕ್ಕಿಳಿದು ಬಿಜೆಪಿಯ ಪರಣ್ಣ ಮುನವಳ್ಳಿ ವಿರುದ್ಧ ಅವರು ಸೋಲು ಕಂಡಿದ್ದರು. ಈ ಬಾರಿ ಮಾಜಿ ಸಚಿವ ಮಲ್ಲಿಕಾರ್ಜುನ ನಾಗಪ್ಪ, ಎಚ್. ಆರ್. ಶ್ರೀನಾಥ್ ಪೈಪೋಟಿಯ ನಡುವೆಯೂ ಇಕ್ಬಾಲ್ ಅನ್ಸಾರಿ ಕಾಂಗ್ರೆಸ್ ಟಿಕೆಟ್ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ. ಮುಸ್ಲಿಂ ಸಮುದಾಯ ಅವರ ಬೆನ್ನಿಗೆ ನಿಂತರೆ ಕಾಂಗ್ರೆಸ್‌ಗೆ ಗೆಲುವು ಸುಲಭ ಎಂಬುದು ಲೆಕ್ಕಾಚಾರವಾಗಿದೆ.
ಕಾಂಗ್ರೆಸ್ ಅಭ್ಯರ್ಥಿ ಇಕ್ಬಾಲ್ ಅನ್ಸಾರಿ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಬಣದಲ್ಲಿ ಗುರುತಿಸಿಕೊಂಡಿದ್ದಾರೆ. ಮಲ್ಲಿಕಾರ್ಜುನ ನಾಗಪ್ಪ, ಎಚ್. ಆರ್. ಶ್ರೀನಾಥ್ ಕೆಪಿಸಿಸಿ ಅಧ್ಯಕ್ಷ ಡಿ. ಕೆ. ಶಿವಕುಮಾರ್ ಬಣದಲ್ಲಿ ಗುರುತಿಸಿಕೊಂಡಿದ್ದರು. ಅಂತಿಮವಾಗಿ ಇಕ್ಬಾಲ್ ಅನ್ಸಾರಿ ಟಿಕೆಟ್ ಪಡೆದಿದ್ದಾರೆ. ಆದರೆ ಮಲ್ಲಿಕಾರ್ಜುನ ನಾಗಪ್ಪ, ಎಚ್. ಆರ್. ಶ್ರೀನಾಥ್ ಅವರ ಬೆಂಬಲ ಅವರಿಗೆ ಸಿಗಲಿದೆಯೇ? ಎಂದು ಕಾದು ನೋಡಬೇಕಿದೆ.
ಕಾಂಗ್ರೆಸ್ ಅಭ್ಯರ್ಥಿ ಘೋಷಣೆ ಮಾಡಿದ ಟಿಕೆಟ್ ಕೈತಪ್ಪಿದ ಎಚ್. ಆರ್. ಶ್ರೀನಾಥ್‌ರನ್ನು ಜನಾರ್ದನ ರೆಡ್ಡಿ ಭೇಟಿ ಮಾಡಿದ್ದರು. ಬಿಜೆಪಿ ಮತ್ತು ಕಾಂಗ್ರೆಸ್‌ನಿಂದ ಹಂಚಿ ಹೋಗುವ ಮತಗಳ ಮೇಲೆ ಅವರು ಕಣ್ಣಿಟ್ಟಿದ್ದಾರೆ. 2018ರ ಚುನಾವಣೆಯಲ್ಲಿ ಬಿಜೆಪಿಯ ಪರಣ್ಣ ಮುನವಳ್ಳಿ 67,617 ಮತಗಳನ್ನು ಪಡೆದು ಜಯಗಳಿಸಿದ್ದರು. ಕಾಂಗ್ರೆಸ್‌ನ ಇಕ್ಬಾಲ್ ಅನ್ಸಾರಿ 59,644 ಮತಗಳನ್ನು ಪಡೆದಿದ್ದರು. ಜೆಡಿಎಸ್‌ನ ಕರಿಯಣ್ಣ ಸಂಘಟಗಿ 14,161 ಮತಗಳನ್ನು ಪಡೆದಿದ್ದರು.
ಜನಾರ್ದನ ರೆಡ್ಡಿ ಬಿಜೆಪಿ ಸರ್ಕಾರದಲ್ಲಿ ಸಚಿವರಾಗಿದ್ದ ಕಾಲದಿಂದಲೂ ಕೊಪ್ಪಳ, ಗದಗ ಮೇಲೆ ಅಪಾರ ಪ್ರೀತಿ ಹೊಂದಿದ್ದಾರೆ. ಅಲ್ಲಿ ಅವರಿಗೆ ಅಪಾರ ಅಭಿಮಾನಿಗಳಿದ್ದಾರೆ. ಸುಪ್ರೀಂಕೋರ್ಟ್ ಆದೇಶದಂತೆ ಬಳ್ಳಾರಿಗೆ ಭೇಟಿ ನೀಡಲು ಸಾಧ್ಯವಿಲ್ಲದೆ ಅವರು ಕೊಪ್ಪಳದ ಗಂಗಾವತಿ ಆಯ್ಕೆಮಾಡಿಕೊಂಡು ಅಲ್ಲಿಂದ ಚುನಾವಣಾ ಕಣಕ್ಕೆ ಇಳಿದಿದ್ದಾರೆ.