ಹುಬ್ಬಳ್ಳಿ: ಯಾವುದೇ ಸಂದರ್ಭದಲ್ಲಿ ರಾಜಕೀಯ ನಿವೃತ್ತಿ ಹೊಂದುವುದಕ್ಕೆ ಸಿದ್ಧ. ಆದರೆ ಗೌರವಯುತವಾಗಿ ಹೊರ ಹೋಗಬೇಕು. ಈ ರೀತಿಯಾಗಿ ಹೋಗುವುದಲ್ಲ ಎಂದು ಬಿಜೆಪಿ ಹೈಕಮಾಂಡ್ ವಿರುದ್ಧ ಮಾಜಿ ಸಿಎಂ ಜಗದೀಶ ಶೆಟ್ಟರ ಮತ್ತೊಮ್ಮೆ ಅಸಮಾಧಾನ ಹೊರ ಹಾಕಿದ್ದಾರೆ.
ದೆಹಲಿಗೆ ತೆರಲುವ ಮುನ್ನ ಬುಧವಾರ ತಮ್ಮ ನಿವಾಸದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಷ್ಟ್ರೀಯ ಅಧ್ಯಕ್ಷರು ಪೋನ್ ಮಾಡಿದ್ದಕ್ಕೆ ನಾನು ದೆಹಲಿಗೆ ಹೋಗುತ್ತಿದ್ದೇನೆ. ಪಾಸಿಟಿವ್ ಹೋಪ್‌ನಲ್ಲಿ ನಾನಿದ್ದೇನೆ. ಚರ್ಚೆ ಮಾಡೋಣ ಬನ್ನಿ ಎಂದು ಹೇಳಿದ್ದಾರೆ. ಪಕ್ಷದ ದೃಷ್ಟಿಯಿಂದ ಎಲ್ಲಾ ಒಳ್ಳೆಯದು ಆಗುತ್ತದೆ ಎಂದು ಹೋಗುತ್ತಿರುವೆ ಎಂದರು.
ಯಡಿಯೂರಪ್ಪನವರನ್ನು ಭೇಟಿಯಾಗಬೇಕಿತ್ತು. ವಿಮಾನ ತಡವಾಗಿದ್ದರಿಂದ ನೇರವಾಗಿ ದೆಹಲಿಗೆ ಹೋಗುತ್ತಿದ್ದೇನೆ. ದೆಹಲಿಗೆ ಹೋಗಿ ಬಂದ ನಂತರ ಯಡಿಯೂರಪ್ಪ ಅವರನ್ನು ಭೇಟಿ ಮಾಡುತ್ತೇನೆ ಎಂದರು.
ನಿವೃತ್ತಿ ಘೋಷಣೆ ಮಾಡಲು ಸಿದ್ಧ:
ಯಾವುದೇ ಸ್ಥಾನಮಾನ ಇಲ್ಲದೇ ಎರಡೂ ವರ್ಷದಿಂದ ಪಕ್ಷದಲ್ಲಿದ್ದೇನೆ. ಯಾವುದೇ ಅಧಿಕಾರ ಇಲ್ಲದೆ ಪಕ್ಷ ಸಂಘಟನೆ ಮಾಡಿದ್ದೇನೆ. ಎಷ್ಟೋ ಕೆಲಸಗಳನ್ನು ನಮ್ಮ ಮಂತ್ರಿಗಳ ಮುಖಾಂತರ ಮಾಡಿಸಿದ್ದೇನೆ ಎಂದರು.
ಯಾವುದೇ ಕಾರಣವಿಲ್ಲದೇ ನಾನು ನಿವೃತ್ತಿ ಘೋಷಣೆ ಮಾಡಲು ಸಿದ್ಧನಿದ್ದೇನೆ. ಆದರೆ ರಾಜಕಾರಣದಲ್ಲಿ ಗೌರವಯುತವಾಗಿ ಹೊರಗಡೆ ಹೋಗಬೇಕು ಎಂಬುದು ನನ್ನ ಅಭಿಪ್ರಾಯ. ಈ ರೀತಿ ಪಕ್ಷದಿಂದ ಹೊರಗಡೆ ಹೋಗಬಾರದು. ನನ್ನ ಸಾಫ್ಟ್ ಕಾರ್ನರ್ ನನ್ನನ್ನು ಇಲ್ಲಿಯವರೆಗೆ ತಂದಿದೆ ಎಂದರು.