ಬೆಳಗಾವಿ: ‘ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ಇಲ್ಲಿನ ಸಿ.ಪಿ.ಇಡಿ ಮೈದಾನದಲ್ಲಿ ಮಾರ್ಚ್ 20ರಂದು ‘ಯುವ ಕ್ರಾಂತಿ ರ್‍ಯಾಲಿ’ ನಡೆಸಲಿದ್ದಾರೆ. ಇದರಲ್ಲಿ 5 ಲಕ್ಷಕ್ಕೂ ಹೆಚ್ಚು ಯುವಜನರು ಪಾಲ್ಗೊಳ್ಳುವ ನಿರೀಕ್ಷೆ ಇದೆ’ ಎಂದು ವಿಧಾನಸಭೆ ವಿರೋಧಪಕ್ಷದ ನಾಯಕ ಸಿದ್ದರಾಮಯ್ಯ ತಿಳಿಸಿದರು.
ನಗರದಲ್ಲಿ ಗುರುವಾರ ಮಾಧ್ಯಮದವರಿಗೆ ಮಾಹಿತಿ ನೀಡಿದ ಅವರು, ‘ಅಂದು ಬೆಳಿಗ್ಗೆ 11ಕ್ಕೆ ಯುವ ಸಮುದಾಯವನ್ನು ಉದ್ದೇಶಿಸಿ ರಾಹುಲ್ ಅವರು ಭಾಷಣ ಮಾಡುತ್ತಾರೆ. ಯಾವ ಕಾರಣಕ್ಕೆ ಭಾರತ್ ಜೋಡೋ ಯಾತ್ರೆ ಮಾಡಿದರು ಎಂಬುದನ್ನು ತಿಳಿಸುತ್ತಾರೆ’ ಎಂದರು.
ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ, ‘ಮಹಾತ್ಮ ಗಾಂಧಿ ಅವರು ಅಧ್ಯಕ್ಷತೆ ವಹಿಸಿಕೊಂಡಿದ್ದ 1924ರ ಕಾಂಗ್ರೆಸ್ ಅಧಿವೇಶನ ಬೆಳಗಾವಿಯಲ್ಲಿ ನಡೆದಿತ್ತು. ಹೀಗಾಗಿ, ಇದೇ ಸ್ಥಳದಿಂದ ‘ಯುವ ಕ್ರಾಂತಿ’ ರ್‍ಯಾಲಿ ಆರಂಭಿಸಲು ರಾಹುಲ್ ಗಾಂಧಿ ನಿರ್ಧರಿಸಿದ್ದಾರೆ’ ಎಂದರು.
‘ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಸೇರಿದಂತೆ ಹಲವು ಮುಖಂಡರು ರ್‍ಯಾಲಿಯಲ್ಲಿ ಪಾಲ್ಗೊಳ್ಳಲಿದ್ದಾರೆ. ಯುವ ಸಮುದಾಯಕ್ಕೆ ಕಾಂಗ್ರೆಸ್ ಏನು ನೀಡಿದೆ? ಮುಂದೆ ಏನು ನೀಡಲಿದೆ? ಎಂಬ ಬಗ್ಗೆ ಮನವರಿಕೆ ಮಾಡಲಿದ್ದಾರೆ’ ಎಂದು ಎಐಸಿಸಿ ಪ್ರಧಾನ ಕಾರ್ಯದರ್ಶಿ ರಣದೀಪ ಸುರ್ಜೇವಾಲಾ ತಿಳಿಸಿದರು.
Laxmi News 24×7