Breaking News

ಉಮೇಶ ಕತ್ತಿ ಅನಂತರ ಹುಕ್ಕೇರಿ ಕ್ಷೇತ್ರದ ಉತ್ತರಾಧಿಕಾರಿ ಯಾರು?

Spread the love

ಬೆಳಗಾವಿ: ಮೂವತ್ತೇಳು ಸುದೀರ್ಘ‌ ವರ್ಷಗಳ ಕಾಲ ಹುಕ್ಕೇರಿ ಕ್ಷೇತ್ರವನ್ನು “ಆಳಿದ್ದ‌’ ಉಮೇಶ ಕತ್ತಿ ಅವರ ಅನುಪಸ್ಥಿತಿ ಈ ವಿಧಾನಸಭೆ ಚುನಾವಣೆಯಲ್ಲಿ ಬಹುವಾಗಿ ಕಾಡಲಿದೆ. ಹಿರಿಯ ರಾಜಕಾರಣಿ ಉಮೇಶ ಕತ್ತಿ ಅನಿರೀಕ್ಷಿತ ಅಗಲಿಕೆಯನ್ನು ಜಿಲ್ಲೆಯ, ಅದರಲ್ಲೂ ಹುಕ್ಕೇರಿ ಕ್ಷೇತ್ರದ ಜನರಿಗೆ ಈಗಲೂ ಅರಗಿಸಿಕೊಳ್ಳಲು ಆಗುತ್ತಿಲ್ಲ.

ಅಂತಹ ಅಳಿಸಲಾರದ ಛಾಪನ್ನು ಉಮೇಶ ಕತ್ತಿ ಬಿಟ್ಟು ಹೋಗಿದ್ದಾರೆ. ತಮ್ಮ ತಂದೆ ವಿಶ್ವನಾಥ ಕತ್ತಿ ಅಗಲಿಕೆಯಿಂದ ಉಪಚುನಾವಣೆ ಎದುರಿಸುವ ಮೂಲಕ ರಾಜಕೀಯ ಕ್ಷೇತ್ರ ಪ್ರವೇಶ ಮಾಡಿದ ಉಮೇಶ ಕತ್ತಿ ಅನಂತರ ಒಮ್ಮೆಯೂ ಹಿಂತಿರುಗಿ ನೋಡುವ ಪ್ರಮೇಯವೇ ಬರಲಿಲ್ಲ. ಬೆಳಗಾವಿ ಜಿಲ್ಲೆಗೆ ವಿಶೇಷವಾಗಿ ಹುಕ್ಕೇರಿ ಕ್ಷೇತ್ರಕ್ಕೆ ಅವರು ಅನಿವಾರ್ಯ ವಾಗಿ ಹೋದರು. ಜನತಾ ಪರಿವಾರದಿಂದ ಬಂದಿದ್ದ ಉಮೇಶ ಕತ್ತಿ ಒಮ್ಮೆ ಮಾತ್ರ ಕಾಂಗ್ರೆಸ್‌ನಿಂದ ಚುನಾವಣೆ ಎದುರಿಸಿದರು. ಆದರೆ ಕ್ಷೇತ್ರದ ಜನರು ಉಮೇಶ ಕತ್ತಿ ಕಾಂಗ್ರೆಸ್‌ಗೆ ಬಂದಿದ್ದನ್ನು ಸ್ವೀಕರಿಸಲಿಲ್ಲ. ಚುನಾವಣೆಯಲ್ಲಿ ಅವರನ್ನು ಸೋಲಿಸುವ ಮೂಲಕ ತಮ್ಮ ಸಿಟ್ಟು ತೀರಿಸಿಕೊಂಡರು. ಚುನಾವಣೆ ಸೋತ ಅನಂತರ ಉಮೇಶ ಕತ್ತಿ ನಾನು ಕಾಂಗ್ರೆಸ್‌ಗೆ ಸೇರಿ ತಪ್ಪು ಮಾಡಿದೆ ಎಂದಿದ್ದರು. ಎಂಟು ಬಾರಿ ಶಾಸಕರಾಗಿ ಕೆಲಸ ಮಾಡಿದ ಉಮೇಶ ಕತ್ತಿ ಸದಾ ತಮ್ಮ ಹಾಸ್ಯಪ್ರಜ್ಞೆ ಮಾತುಗಳು, ರಾಜಕಾರಣದ ಎಲ್ಲ ಮಜಲುಗಳ ಅನುಭವದಿಂದ ಸಾಕಷ್ಟು ಹೆಸರು ಮಾಡಿದ್ದರು. ಉತ್ತರ ಕರ್ನಾಟಕ ಪ್ರತ್ಯೇಕ ರಾಜ್ಯವಾಗಬೇಕು. ಅದರ ಮೊದಲ ಮುಖ್ಯಮಂತ್ರಿ ನಾನೇ ಎನ್ನುವ ಮೂಲಕ ವಿವಾದಕ್ಕೂ ಕಾರಣವಾಗಿದ್ದರು.

ಉಮೇಶ ಕತ್ತಿ ಅನಂತರ ಹುಕ್ಕೇರಿ ಕ್ಷೇತ್ರದ ಉತ್ತರಾಧಿಕಾರಿ ಯಾರು ಎಂಬ ಕುತೂಹಲ ಕ್ಷೇತ್ರದಲ್ಲಿ ಮನೆ ಮಾಡಿದೆ. ಅವರ ಸ್ಥಾನಕ್ಕೆ ಬಿಜೆಪಿಯಿಂದ ಉಮೇಶ ಕತ್ತಿ ಪುತ್ರ, ಜಿ.ಪಂ. ಮಾಜಿ ಸದಸ್ಯ, ಹಿರಾ ಶುಗರ್ಸ್‌ ಅಧ್ಯಕ್ಷ ನಿಖೀಲ್‌ ಹಾಗೂ ಉಮೇಶ ಕತ್ತಿ ಸಹೋದರ, ಮಾಜಿ ಸಂಸದ ರಮೇಶ ಕತ್ತಿ ಹೆಸರು ಕೇಳಿ ಬರುತ್ತಿವೆ. ಕತ್ತಿ ಕುಟುಂಬ ಈ ಚುನಾವಣೆಯಲ್ಲಿ ಅನು ಕಂಪವನ್ನು ಹೆಚ್ಚಾಗಿ ನಂಬಿಕೊಂಡಿದೆ. ಇದೇ ಲೆಕ್ಕಾಚಾರದಲ್ಲಿ ಬಿಜೆಪಿ ವರಿಷ್ಠರು ಸಹ ಬೇರೆಯವರಿಗೆ ಟಿಕೆಟ್‌ ಕೊಡುವ ಬಗ್ಗೆ ವಿಚಾರ ಮಾಡಿಲ್ಲ. ಕತ್ತಿ ಕುಟುಂಬ ಸದಸ್ಯರ ಹೊರತಾಗಿ ಮಾಜಿ ಸಚಿವ ಶಶಿಕಾಂತ ನಾಯಕ ಮತ್ತು ವೃತ್ತಿಯಿಂದ ವೈದ್ಯರಾಗಿರುವ ಹಾಗೂ ಚಿಕ್ಕೋಡಿ ಜಿಲ್ಲಾ ಬಿಜೆಪಿ ಅಧ್ಯಕ್ಷ ಡಾ| ರಾಜೇಶ ನೇರ್ಲಿ ಆಕಾಂಕ್ಷಿಗಳಾಗಿದ್ದಾರೆ.

ಕಾಂಗ್ರೆಸ್‌ನಲ್ಲಿ ಮುಗಿಯದ ಗೊಂದಲ: ಕಾಂಗ್ರೆಸ್‌ನಲ್ಲಿ ಮಾತ್ರ ಯಾರಿಗೆ ಟಿಕೆಟ್‌ ಕೊಡಬೇಕು ಎಂಬ ಗೊಂದಲ ಇದೆ. ಈ ಹಿಂದಿನ ಚುನಾ ವಣೆಗಳಲ್ಲಿ ಉಮೇಶ ಕತ್ತಿ ಅವರಿಗೆ ಬದ್ಧ ರಾಜಕೀಯ ವೈರಿಯಾಗಿದ್ದ ಹಿರಿಯ ರಾಜಕಾರಣಿ ಎ.ಬಿ. ಪಾಟೀಲ ಅವರ ಹೆಸರು ಪ್ರಮುಖವಾಗಿ ಕೇಳಿ ಬರುತ್ತಿದೆ. ಆದರೆ ಬೆಳಗಾವಿ ಉತ್ತರ ಕ್ಷೇತ್ರದ ಮೇಲೆ ಹೆಚ್ಚು ಕಣ್ಣಿಟ್ಟಿರುವ ಎ.ಬಿ. ಪಾಟೀಲ ಹುಕ್ಕೇರಿ ಬಗ್ಗೆ ಅಷ್ಟಾಗಿ ಆಸಕ್ತಿ ತೋರಿಸಿಲ್ಲ. ಇದರಿಂದ ವರಿಷ್ಠರು ಸ್ವಲ್ಪ ಗೊಂದಲ ದಲ್ಲಿದ್ದಾರೆ. ಎ.ಬಿ. ಪಾಟೀಲ ಅವರಲ್ಲದೆ ಲಿಂಗಾಯತ ಪಂಚಮಸಾಲಿಯ ರಿಷಬ್‌ ಪಾಟೀಲ ಹಾಗೂ ನ್ಯಾಯವಾದಿ ಎಂ.ಎಂ. ಪಾಟೀಲ ಸಹ ಕಾಂಗ್ರೆಸ್‌ ಟಿಕೆಟ್‌ಗೆ ಅರ್ಜಿ ಸಲ್ಲಿಸಿದ್ದಾರೆ. ರಿಷಬ್‌ ಪಾಟೀಲ ರಾಜಕೀಯಕ್ಕೆ ಹೊಸಬರು. ಅಮೆರಿಕದಲ್ಲಿ ಎಂಜಿನಿಯರಿಂಗ್‌ ಪದವಿ ಮುಗಿಸಿ ನೇರವಾಗಿ ರಾಜಕೀಯಕ್ಕೆ ಬಂದಿದ್ದಾರೆ. ಇವರಲ್ಲಿ ಕಾಂಗ್ರೆಸ್‌ ಯಾರಿಗೆ ಮಣೆ ಹಾಕುತ್ತದೆ ಎಂಬುದು ಕುತೂಹಲ ಮೂಡಿಸಿದೆ.


Spread the love

About Laxminews 24x7

Check Also

ಅಥಣಿ ನಗರದ ಪ್ರವಾಸಿ ಮಂದಿರದಲ್ಲಿ ಇಂದು ಸಾರ್ವಜನಿಕರ ಅಹವಾಲು ಆಲಿಸಿ, ಅವರ ಸಮಸ್ಯೆಗಳಿಗೆ ಸೂಕ್ತ ಪರಿಹಾರ

Spread the love ಅಥಣಿ ನಗರದ ಪ್ರವಾಸಿ ಮಂದಿರದಲ್ಲಿ ಇಂದು ಸಾರ್ವಜನಿಕರ ಅಹವಾಲು ಆಲಿಸಿ, ಅವರ ಸಮಸ್ಯೆಗಳಿಗೆ ಸೂಕ್ತ ಪರಿಹಾರ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ