ಬೆಳಗಾವಿ: ‘ಪ್ರಧಾನಿ ನರೇಂದ್ರ ಮೋದಿ ಅವರ ಸಾವಿಗೆ ಕಾಂಗ್ರೆಸ್ ಜಪ ಮಾಡುತ್ತಿದೆ ಎಂಬುದು ದೊಡ್ಡ ಸುಳ್ಳು. ಈ ರೀತಿ ಯಾರೂ ಎಲ್ಲಿಯೂ ಹೇಳಿಲ್ಲ. ತಮ್ಮಷ್ಟಕ್ಕೆ ತಾವೇ ಇಂಥ ಭಾವುಕ ಸನ್ನಿವೇಶ ಹುಟ್ಟುಹಾಕುವುದು ಅವರಿಗೆ ಕರಗತ’ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಪ್ರತಿಕ್ರಿಯಿಸಿದರು.
‘ಸಿದ್ದರಾಮಯ್ಯನನ್ನು ಮುಗಿಸಿಬಿಡಿ ಎಂದು ಅಶ್ವತ್ಥನಾರಾಯಣ ಬಹಿರಂಗವಾಗಿ ಹೇಳಿದರು. ನಮ್ಮ ಭಾವನೆಗಳು ಅವರಷ್ಟು ಕೆಟ್ಟದಾಗಿಲ್ಲ. ಪ್ರಧಾನಿ ಆರೋಗ್ಯವಾಗಿರಲಿ, ಹೆಚ್ಚು ಕಾಲ ಬದುಕಲಿ’ ಎಂದು ಅವರು ನಗರದಲ್ಲಿ ಬುಧವಾರ ಮಾಧ್ಯಮದವರ ಮುಂದೆ ಹೇಳಿದರು.
‘ಪಾಪ; ಯಡಿಯೂರಪ್ಪ ಸದನದಲ್ಲೇ ಕಣ್ಣೀರಿಟ್ಟರು. ಅವರು ಒಳಗೊಳಗೇ ಕುದಿಯುತ್ತಿದ್ದಾರೆ. ಬಿಜೆಪಿ ಸೋತು ಮನೆ ಸೇರಬೇಕು ಎಂದೇ ಬಯಸುತ್ತಿದ್ದಾರೆ’ ಎಂದೂ ಕುಟುಕಿದರು.
ಬೆಳಗಾವಿ ಗ್ರಾಮೀಣ ವಿಧಾನಸಭಾ ಕ್ಷೇತ್ರದ ಪಂತಬಾಳೇಕುಂದ್ರಿಯಲ್ಲಿ ‘ಪ್ರಜಾಧ್ವನಿ’ ಯಾತ್ರೆಯಲ್ಲಿ ಮಾತನಾಡಿದ ಅವರು, ‘ಬೆಳಗಾವಿ ಗ್ರಾಮೀಣ ಶಾಸಕಿ ಲಕ್ಷ್ಮೀ ಹೆಬ್ಬಾಳಕರ ಛತ್ರಪತಿ ಶಿವಾಜಿ ಮೂರ್ತಿ ಪ್ರತಿಷ್ಠಾಪಿಸಿದ್ದಾರೆ. ಅದರ ಉದ್ಘಾಟನೆಗೆ ಮುಖ್ಯಮಂತ್ರಿಯೇ ಹಟ ಹಿಡಿದಿದ್ದಾರೆ. ಬೊಮ್ಮಾಯಿ ಅವರಿಗೆ ನಾಚಿಕೆ ಆಗಬೇಕು’ ಎಂದು ಕಿಡಿ ಕಾರಿದರು.
‘ಪ್ರಧಾನಿ ಕೋವಿಡ್ ಬಂದಾಗ ರಾಜ್ಯಕ್ಕೆ ಬರಲಿಲ್ಲ, ಪ್ರವಾಹ ಬಂದಾಗ ಬರಲಿಲ್ಲ. ಈಗ ಚುನಾವಣೆ ಕಾಲಕ್ಕೆ ವಾರಕ್ಕೊಮ್ಮೆ ಬರುತ್ತಿದ್ದಾರೆ. ಬೆಳಗಾವಿಯಲ್ಲಿ ಬಾಡಿಗೆ ಜನರ ಕರೆತಂದು ರೋಡ್ ಶೋ ಮಾಡಿದರು. ಬೆಳಗಾವಿಗೆ ಏನು ಕೊಟ್ಟರು? ಕಳಸಾ ಬಂಡೂರಿ ಬಗ್ಗೆ ಏಕೆ ಮಾತಾಡಲಿಲ್ಲ? ಕೃಷ್ಣಾ ಮೇಲ್ದಂಡೆ ಯೋಜನೆ ಬಗ್ಗೆ ಏಕೆ ಬಾಯಿಬಿಡಲಿಲ್ಲ?’ ಎಂದು ಸಿದ್ದರಾಮಯ್ಯ ಪ್ರಶ್ನಿಸಿದರು.
‘ನನ್ನ ಅಧಿಕಾರದ ವೇಳೆ ₹10,600 ಕೋಟಿ ಹೊರೆಯಾದರೂ ಆರನೇ ವೇತನ ಆಯೋಗ ಜಾರಿ ಮಾಡಿದೆ. ಮುಂದೆ ಕೂಡ ನಾನೇ ಏಳನೇ ವೇತನ ಆಯೋಗ ಜಾರಿ ಮಾಡುತ್ತೇನೆ’ ಎಂದು ಭರವಸೆ ನೀಡಿದರು.
ಇದಕ್ಕೂ ಮುನ್ನ ಅವರು ಶಾಸಕಿ ಲಕ್ಷ್ಮೀ ಹೆಬ್ಬಾಳಕರ ಅವರೊಂದಿಗೆ ರೋಡ್ ಶೋ ಕೂಡ ನಡೆಸಿದರು.
Laxmi News 24×7