(ಬೈಲಹೊಂಗಲ ): ‘ರಾಣಿ ಮಲ್ಲಮ್ಮನ ವೀರೋಚಿತ ಹೋರಾಟ, ಕೆಚ್ಚೆದೆಯ ಗುಣ ಆಧುನಿಕ ಮಹಿಳೆಯರಿಗೆ ದಾರಿದೀಪವಾಗಲಿ’ ಎಂದು ಪದ್ಮಶ್ರೀ ಪ್ರಶಸ್ತಿ ಪುರಸ್ಕೃತರಾದ ಸೀತವ್ವ ಜೋಡಟ್ಟಿ ಆಶಿಸಿದರು.
ಮಲ್ಲಮ್ಮನ ಬೆಳವಡಿ ಗ್ರಾಮದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಜಿಲ್ಲಾಡಳಿತ ಮಂಗಳವಾರ ರಾತ್ರಿ ಆಯೋಜಿಸಿದ್ದ ‘ಬೆಳವಡಿ ಮಲ್ಲಮ್ಮನ ಉತ್ಸವ’ ಉದ್ಘಾಟನೆ ಸಮಾರಂಭದಲ್ಲಿ ‘ರಾಣಿ ಮಲ್ಲಮ್ಮ ಪ್ರಶಸ್ತಿ’ ಸ್ವೀಕರಿಸಿ ಅವರು ಮಾತನಾಡಿದರು.
‘ವೀರ ವನಿತೆ ಬೆಳವಡಿ ಮಲ್ಲಮ್ಮನ ಸಾಹಸಮಯ ಇತಿಹಾಸ ಹಾಗೂ ಭಾಷಾ ಪ್ರೇಮ ಜಿಲ್ಲೆಗೆ ಮಾತ್ರ ಸಿಮೀತವಾಗಿದೆ. ಝಾನ್ಸಿ ರಾಣಿಯ ಹಾಗೆ ದೇಶದುದ್ದಕ್ಕೂ ಹಬ್ಬಬೇಕಿದೆ’ ಎಂದರು.
ಅಧ್ಯಕ್ಷತೆ ವಹಿಸಿ ಮಾತನಾಡಿದ ಶಾಸಕ ಮಹಾಂತೇಶ ಕೌಜಲಗಿ, ‘ಬೆಳವಡಿ ಮಲ್ಲಮ್ಮ ಪ್ರಾಧಿಕಾರ ರಚನೆಗೆ ಪ್ರಾಮಾಣಿಕ ಪ್ರಯತ್ನ ಮಾಡಲಾಗಿದೆ. ಬರುವ ದಿನಗಳಲ್ಲಿ ಪ್ರಾಧಿಕಾರ ರಚನೆ ಆಗಲಿದೆ’ ಎಂದರು.
‘ಕಾಡಾ’ ಅಧ್ಯಕ್ಷ ಡಾ.ವಿಶ್ವನಾಥ ಪಾಟೀಲ ಮಾತನಾಡಿದರು. ಬೆಳವಡಿ ಸಂಸ್ಥಾನದ ಶಿವಮಹಾಂತ ಶಿವಾಚಾರ್ಯ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಜಿಲ್ಲಾಧಿಕಾರಿ ನಿತೇಶ ಪಾಟೀಲ, ಎಸ್ಪಿ ಡಾ.ಸಂಜೀವ ಪಾಟೀಲ, ಉಪವಿಭಾಗಾಧಿಕಾರಿ ಪ್ರಭಾವತಿ ಫಕೀರಪೂರ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕಿ ವಿದ್ಯಾವತಿ ಭಜಂತ್ರಿ, ತಹಶೀಲ್ದಾರ್ ಜೆ.ಸಿ.ಅಷ್ಟಗಿಮಠ, ತಾಲ್ಲೂಕು ಪಂಚಾಯಿತಿ ಇಒ ಸುಭಾಸ ಸಂಪಗಾಂವ, ಗ್ರಾಮ ಪಂಚಾಯಿತಿ ಅಧ್ಯಕ್ಷೆ ರೇಣುಕಾ ಕುರಿ ಸೇರಿದಂತೆ ಹಲವು ಗಣ್ಯರು ಇದ್ದರು.
Laxmi News 24×7