Breaking News

ಅಸಾಧ್ಯವನ್ನು ಸಾಧ್ಯವಾಗಿಸಿದ ಮೋದಿ: ಸಿಎಂ ಬೊಮ್ಮಾಯಿ

Spread the love

ಬೆಳಗಾವಿ: ಪ್ರಧಾನಿ ಮೋದಿ ದೇಶವನ್ನು ಅಸಾಧ್ಯದಿಂದ ಸಾಧ್ಯದ ಕಡೆಗೆ, ಅನಿಶ್ಚಿತತೆಯಿಂದ ನಿಶ್ಚಿತತೆಯೆಡೆಗೆ ತೆಗೆದುಕೊಂಡು ಹೋಗಿದ್ದಾರೆ. ಸಂಶಯವನ್ನು ಸಂಕಲ್ಪ ಮಾಡಿದ್ದಾರೆ. ಸಂಕಲ್ಪವನ್ನು ಸಿದ್ಧಿ ಮಾಡಿ ತೋರಿಸಿದ್ದಾರೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಬಣ್ಣಿಸಿದರು.

 

ನಗರದ ಮಾಲಿನಿ ಸಿಟಿ ಮೈದಾನದಲ್ಲಿ ಸೋಮವಾರ ನಡೆದ 2,240 ಕೋಟಿ ರೂ. ವೆಚ್ಚದ ವಿವಿಧ ಯೋಜನೆಗಳ ಉದ್ಘಾಟನೆ ಮತ್ತು ಶಂಕುಸ್ಥಾಪನೆ ಸಮಾರಂಭದಲ್ಲಿ ಮಾತನಾಡಿ, ಮೋದಿ ಆಸೆಯಂತೆ ನವ ಭಾರತ ಮತ್ತು ನವ ಕರ್ನಾಟಕ ನಿರ್ಮಾಣಕ್ಕೆ ನಾವು ಸಿದ್ಧರಾಗಿದ್ದೇವೆ. ಸಂಕಲ್ಪವನ್ನೂ ಮಾಡಿದ್ದೇವೆ. ಭಾರತವನ್ನು ವಿಶ್ವಮಾನ್ಯವಾಗಿಸಿರುವ ಮೋದಿ ಅವರ ನವಭಾರತಕ್ಕಾಗಿ ನಾವು ನವ ಕರ್ನಾಟಕ ನಿರ್ಮಿಸುತ್ತೇವೆ. ಐದು ಟ್ರಿಲಿಯನ್‌ ಆರ್ಥಿಕತೆಯ ಸಂಕಲ್ಪಕ್ಕೆ ರಾಜ್ಯವೂ ಒಂದು ಟ್ರಿಲಿಯನ್‌ ಆರ್ಥಿಕತೆಯ ಕೊಡುಗೆ ನೀಡಲಿದೆ ಎಂದರು.

ಪ್ರಧಾನಿ ಮೋದಿ ಆಡಳಿತದಲ್ಲಿ ಅಸಾಧ್ಯ ಎಂಬುದೆಲ್ಲವೂ ಸಾಧ್ಯವಾಗಿದೆ. 10 ಕೋಟಿಗೂ ಅಧಿಕ ಮನೆಗಳಿಗೆ ನಲ್ಲಿಯ ಮೂಲಕ ಶುದ್ಧ ನೀರು ಬರುತ್ತಿದೆ. ಮೋದಿ ಭಾರತದ ಭಗೀರಥ. ಡಬಲ್‌ ಎಂಜಿನ್‌ ಸರ್ಕಾರ ರೈತರ ಪರವಾಗಿ ಕೆಲಸ ಮಾಡುತ್ತಿದೆ. ಕರ್ನಾಟಕದಲ್ಲಿ ರೈತರ ಮಕ್ಕಳಿಗಾಗಿ ವಿದ್ಯಾನಿಧಿ ಯೋಜನೆ, ಭೂ ಸಿರಿ ಯೋಜನೆ ಜಾರಿಗೆ ತರಲಾಗಿದೆ ಎಂದರು.

ಕೇಂದ್ರ ಕೃಷಿ ಹಾಗೂ ಕಿಸಾನ್‌ ಕಲ್ಯಾಣ ಮಂತ್ರಿ ನರೇಂದ್ರಸಿಂಗ್‌ ತೋಮರ್‌ ಮಾತನಾಡಿ, ರೈತರ ಆದಾಯ ಹೆಚ್ಚಿಸಲು ಪಿಎಂ ಕಿಸಾನ್‌ ಸಮ್ಮಾನ್‌ ಯೋಜನೆ ಜಾರಿಯಾಗಿದೆ. ಈ ಬೃಹತ್‌ ರಾಷ್ಟ್ರದಲ್ಲಿ ಇಂತಹ ರೈತ ಪರ ಯೋಜನೆ ಅನುಷ್ಠಾನಗೊಳಿಸುವುದು ಸಾಮಾನ್ಯದ ಮಾತಲ್ಲ. ಆದರೆ ಇದು ಸಾಧ್ಯವಾಗಿದೆ. ಈಗ ಬೆಳಗಾವಿಯ ನೆಲದ ಮೂಲಕ ದೇಶದ ರೈತರ ಬ್ಯಾಂಕ್‌ ಖಾತೆಗಳಿಗೆ ಸುಮಾರು 16 ಸಾವಿರ ಕೋಟಿ ರೂ. ನೇರ ವರ್ಗಾವಣೆ ಮಾಡಲಾಗಿದೆ ಎಂದರು.

ರೈತ ಸಮೃದ್ಧವಾಗಿ ಬೆಳೆದರೆ ದೇಶ ಸಮೃದ್ಧವಾಗಿರಲು ಸಾಧ್ಯ. ರೈತನ ಹಿತ ಕಾಪಾಡುವ ಕಾರ್ಯವನ್ನು ಸರ್ಕಾರ ನಿರ್ವಹಿಸುತ್ತಿದೆ. ಸಿರಿ ಧಾನ್ಯಗಳ ಉತ್ಪಾದನೆ ಮತ್ತು ಬಳಕೆಯ ಜಾಗೃತಿ ಮೂಡಿಸಲು ಮಾ.18ರಂದು ಪ್ರಧಾನಿ ಮೋದಿ ಅಂತಾರಾಷ್ಟ್ರೀಯ ಸಿರಿಧಾನ್ಯ ಮೇಳ ಉದ್ದೇಶಿಸಿ ಮಾತನಾಡಲಿದ್ದಾರೆ ಎಂದರು.

ಕೇಂದ್ರ ಗಣಿ, ಕಲ್ಲಿದ್ದಲು ಹಾಗೂ ಸಂಸದೀಯ ವ್ಯವಹಾರಗಳ ಸಚಿವ ಪ್ರಹ್ಲಾದ ಜೋಶಿ ಮಾತನಾಡಿ, ಜೈ ಜವಾನ್‌ ಜೈ ಕಿಸಾನ್‌ ಘೋಷ‌ಣೆ ಜತೆಗೆ ದೇಶವನ್ನು ಮುನ್ನಡೆಸುತ್ತಿರುವ ಪ್ರಧಾನಿ ಮೋದಿ ಬೆಳಗಾವಿಯಲ್ಲಿ ನಡೆಸಿದ ಐತಿಹಾಸಿಕ ರೋಡ್‌ ಶೋ ರಾಜ್ಯದ ರಾಜಕಾರಣದಲ್ಲಿ ಸಂಚಲನ ಮೂಡಿಸಲಿದೆ. ಈ ಅದ್ಭುತ ರೋಡ್‌ ಶೋ ನೀವು ಪ್ರಧಾನಿ ಮೋದಿ ಅವರ ಮೇಲಿಟ್ಟಿರುವ ಪ್ರೀತಿ ಎಂದರು.

ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ, ಸಚಿವರಾದ ಗೋವಿಂದ ಕಾರಜೋಳ, ಬಿ.ಸಿ.ಪಾಟೀಲ್‌, ಶಶಿಕಲಾ ಜೊಲ್ಲೆ, ಸಂಸದರಾದ ಮಂಗಲಾ ಸುರೇಶ ಅಂಗಡಿ, ಅಣ್ಣಾಸಾಹೇಬ ಜೊಲ್ಲೆ, ರಾಜ್ಯಸಭಾ ಸದಸ್ಯ ಈರಣ್ಣ ಕಡಾಡಿ, ಶಾಸಕರಾದ ಮಹೇಶ ಕುಮಠಳ್ಳಿ, ಪಿ.ರಾಜೀವ, ದುರ್ಯೋಧನ ಐಹೊಳೆ, ಬಾಲಚಂದ್ರ ಜಾರಕಿಹೊಳಿ, ರಮೇಶ ಜಾರಕಿಹೊಳಿ, ಅಭಯ್‌ ಪಾಟೀಲ, ಮಹದೇವಪ್ಪ ಯಾದವಾಡ, ಅನಿಲ ಬೆನಕೆ, ಮಹಾಂತೇಶ ದೊಡ್ಡಗೌಡರ್‌, ವಿಧಾನ ಪರಿಷ‌ತ್‌ ಸದಸ್ಯರಾದ ಲಕ್ಷ್ಮಣ ಸವದಿ, ಹನುಮಂತ ನಿರಾಣಿ, ಡಾ.ಸಾಬಣ್ಣ ತಳವಾರ ಉಪಸ್ಥಿತರಿದ್ದರು


Spread the love

About Laxminews 24x7

Check Also

ಸುವರ್ಣಸೌಧದಲ್ಲಿ ಬಾಪೂಜಿ ಜೀವನ ಚರಿತ್ರೆಯ ಅಪರೂಪದ ಫೋಟೋಗಳ ಪ್ರದರ್ಶನ

Spread the loveಬೆಳಗಾವಿ: ಕುಂದಾನಗರಿ ಈಗ ಕಾಂಗ್ರೆಸ್ ಅಧಿವೇಶನದ ಶತಮಾನೋತ್ಸವಕ್ಕೆ ಸಜ್ಜಾಗುತ್ತಿದೆ. ಇದರ ನಡುವೆ ಚಳಿಗಾಲದ ಅಧಿವೇಶನ ನಡೆಯುತ್ತಿರುವ ಸುವರ್ಣ ವಿಧಾನಸೌಧದಲ್ಲಿ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ