Breaking News

ಆಪರೇಶನ್‌ ಕಮಲದ ಮೂವರು ಬಾಂಬೆ ಫ್ರೆಂಡ್ಸ್‌ ಮತ್ತೆ ಕಾಂಗ್ರೆಸ್ಸಿಗೆ?

Spread the love

ರಾಜಕೀಯ ನಿಂತ ನೀರಲ್ಲ, ಇಲ್ಲಿ ಯಾರೂ ಶತ್ರುಗಳಿಲ್ಲ, ಮಿತ್ರರೂ ಇಲ್ಲ ಎನ್ನುವ ಮಾತನ್ನು ನಾಡಿನ ರಾಜಕಾರಣಿಗಳು ಚುನಾವಣೆಯ ವೇಳೆ ನಿಜವೆಂದು ರುಜುವಾತು ಪಡಿಸುತ್ತಾರೆ. ಇದಕ್ಕೆ ಪೂರಕವಾದ ರಾಜಕೀಯ ವಿದ್ಯಮಾನಗಳು ರಾಜ್ಯ ರಾಜಕೀಯದಲ್ಲಿ ನಡೆಯುತ್ತಿರುವುದು ಗೊತ್ತಿರುವ ವಿಚಾರ.

ಈಗಾಗಲೇ ಹಲವರು ಪಕ್ಷ ನಿಯತ್ತನ್ನು ಬದಲಿಸಿಯಾಗಿದೆ.

ಕರ್ನಾಟಕ ವಿಧಾನಸಭಾ ಚುನಾವಣೆಗೆ ದಿನಾಂಕ ನಿಗದಿಗೆ ದಿನಗಣನೆ ಆರಂಭವಾಗಿದೆ. ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರು ಇನ್ನೇನು ಹದಿನೈದು ದಿನಗಳಲ್ಲಿ ಚುನಾವಣಾ ಆಯೋಗ ತಾರೀಕು ನಿಗದಿ ಪಡಿಸುತ್ತದೆ ಎನ್ನುವ ಮಾತನ್ನಾಡಿದ್ದಾರೆ. ಬೇರೆ ಬೇರೆ ಪಕ್ಷದಿಂದ ಬರುವ ಎಲ್ಲರನ್ನೂ ಕಾಂಗ್ರೆಸ್ಸಿಗೆ ಸೇರಿಸಿಕೊಳ್ಳಲು ಆಗುವುದಿಲ್ಲ ಎನ್ನುವ ಡಿಕೆಶಿ ಮಾತಿಗೆ ರಾಜಕೀಯ ಗೂಡಾರ್ಥ ಬಹಳಷ್ಟಿದೆ ಎನ್ನುವ ವಿಶ್ಲೇಷಣೆ ರಾಜಕೀಯ ಪಂಡಿತರಿಂದ ಬರುತ್ತಿದೆ.

ಆಪರೇಶನ್ ಕಮಲದ ಮೂಲಕ ಜೆಡಿಎಸ್ ಮತ್ತು ಕಾಂಗ್ರೆಸ್ಸಿನಿಂದ ಬಿಜೆಪಿಗೆ ಸೇರ್ಪಡೆಯಾಗಿದ್ದ ಬಾಂಬೆ ಫ್ರೆಂಡ್ಸ್, ಉಪ ಚುನಾವಣೆಯ ವೇಳೆ ಇದ್ದ ಅದೇ ಹಿಂದಿನ ಒಗ್ಗಟ್ಟಿನಲ್ಲಿದ್ದಾರಾ ಎನ್ನುವ ಪ್ರಶ್ನೆ ಎದುರಾದಾಗ ಅದಕ್ಕೆ ಉತ್ತರ ಎಚ್.ವಿಶ್ವನಾಥ್ ಕಡೆ ಕೈತೋರಿಸಬಹುದು. ಬಹಿರಂಗವಾಗಿಯೇ ವಿಶ್ವನಾಥ್, ಬಿಜೆಪಿ ವಿರುದ್ದ ತಿರುಗಿಬಿದ್ದು, ಸಿದ್ದರಾಮಯ್ಯನವರ ಬಗ್ಗೆ ವಿಶೇಷ ಒಲವನ್ನು ತೋರಿಸುತ್ತಿದ್ದಾರೆ.

 

ಸಂಪುಟ ವಿಸ್ತರಣೆಯ ವಿಚಾರ ಮುನ್ನಲೆಯಲ್ಲಿ ಇದ್ದಂತಹ ಸಂದರ್ಭದಲ್ಲಿ ಬೆಳಗಾವಿ ಸಾಹುಕಾರ ರಮೇಶ್ ಜಾರಕಿಹೊಳಿ, ಜೆಡಿಎಸ್ ಕಡೆ ಮುಖ ಮಾಡುತ್ತಿದ್ದಾರಾ ಎನ್ನುವ ಬೆಳವಣಿಗೆಗಳು ನಡೆದಿದ್ದವು. ಈ ವಿಚಾರಕ್ಕೆ ಸಂಬಂಧಿಸಿದಂತೆ ಜೆಡಿಎಸ್ ರಾಜ್ಯಾಧ್ಯಕ್ಷ ಸಿ.ಎಂ.ಇಬ್ರಾಹಿಂ ಅವರನ್ನು ಮಾಧ್ಯಮವರು ಪ್ರಶ್ನಿಸಿದಾಗ, “ನೋ ಕಾಮೆಂಟ್ಸ್, ರಾಜ್ಯದ ಉತ್ತರ ಭಾಗದಿಂದ ಬರುವವರಿಗೆ ಪಕ್ಷದ ಬಾಗಿಲು ತೆರೆದಿರುತ್ತದೆ. ಚಿಕ್ಕೋಡಿ ಭಾಗದಿಂದ ಪಕ್ಷ ಬಲವೃದ್ದನೆಗೆ ಅನುಕೂಲವಾಗುತ್ತದೆ”ಎಂದು ಇಬ್ರಾಹಿಂ ಹೇಳಿದ್ದರು.

ಕಾಂಗ್ರೆಸ್ ಮತ್ತು ಜೆಡಿಎಸ್ಸಿನ ಹದಿನೈದು ಶಾಸಕರು, ಆಪರೇಶನ್ ಕಮಲದ ಮೂಲಕ ಬಿಜೆಪಿಗೆ ಸೇರ್ಪಡೆಗೊಂಡು, ಕರ್ನಾಟಕದಲ್ಲಿ ಯಡಿಯೂರಪ್ಪನವರ ನೇತೃತ್ವದ ಬಿಜೆಪಿ ಸರಕಾರ ಅಸ್ತಿತ್ವಕ್ಕೆ ಬರಲು ಕಾರಣರಾಗಿದ್ದರು. ಇದರಲ್ಲಿ ಎಚ್.ವಿಶ್ವನಾಥ್ ಮತ್ತು ಎಂ.ಟಿ.ಬಿ ನಾಗರಾಜ್ ಉಪಚುನಾವಣೆಯಲ್ಲಿ ಸೋಲುಂಡಿದ್ದರು. ರೋಷನ್ ಬೇಗ್ ಅವರಿಂದ ತೆರವಾಗಿದ್ದ ಶಿವಾಜಿನಗರ ಕ್ಷೇತ್ರದಲ್ಲಿ ಕಾಂಗ್ರೆಸ್ಸಿನ ರಿಜ್ವಾನ್ ಅರ್ಷದ್ ಗೆಲುವು ಸಾಧಿಸಿದ್ದರು. ಆದಾಗ್ಯೂ, ವಿಶ್ವನಾಥ್ ಹೊರತಾಗಿ ಎಲ್ಲರಿಗೂ ಸಚಿವ ಸ್ಥಾನ ಸಿಕ್ಕಿತ್ತು. ಈಗ ಚುನಾವಣಾ ವರ್ಷದಲ್ಲಿ ಮೂವರು ವಾಪಸ್ ಕಾಂಗ್ರೆಸ್ಸಿಗೆ ಹೋಗುವ ಸುದ್ದಿ ಹರಿದಾಡುತ್ತಿದೆ.

ಹಾಲೀ ಶಾಸಕರು, ಸಚಿವರುಗಳು ಕಾಂಗ್ರೆಸ್ ಸೇರ್ಪಡೆಗೊಳ್ಳಲಿದ್ದಾರಾ?

“ಹಾಲೀ ಶಾಸಕರು, ಸಚಿವರುಗಳು, ಈ ಹಿಂದೆ ಮಂತ್ರಿಯಾಗಿದ್ದವರು, ಪ್ರಮುಖ ಮುಖಂಡರು, ಎಕ್ಸ್ ಎಂಎಲ್‌ಎಗಳು ಕಾಂಗ್ರೆಸ್ ಸೇರುವ ಸಂಭವವಿದೆ” ಎಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯನವರು ಹೇಳಿದ್ದಾರೆ. ಸಿಎಲ್ಪಿ ನಾಯಕರ ಹೇಳಿಕೆಯ ಹಿಂದೆ ಆಪರೇಶನ್ ಕಮಲದ ಮೂಲಕ ಬಿಜೆಪಿ ಸೇರಿದ್ದವರು ವಾಪಸ್ ಕಾಂಗ್ರೆಸ್ಸಿಗೆ ಸೇರುವ ಮುನ್ಸೂಚನೆಯ ಮಾತಾ ಇದು ಎನ್ನುವ ಗುಸುಗುಸು ಸುದ್ದಿ ರಾಜಕೀಯ ವಲಯದಲ್ಲಿ ಜೋರಾಗಿದೆ. ಅದರಲ್ಲಿ ಪ್ರಮುಖವಾಗಿ, ಮೂವರು ಹಾಲೀ ಸಚಿವರ ಹೆಸರು ಕೆಲವೊಂದು ಮಾಧ್ಯಮಗಳಲ್ಲಿ ಹರಿದಾಡುತ್ತಿದೆ.

ಸಚಿವ ಕೆ.ಸಿ.ನಾರಾಯಣ ಗೌಡ ಮತ್ತೆ ಕಾಂಗ್ರೆಸ್ಸಿಗೆ?

2018ರ ವಿಧಾನಸಭಾ ಚುನಾವಣೆಯಲ್ಲಿ ಜೆಡಿಎಸ್ ಟಿಕೆಟಿನಿಂದ ಸ್ಪರ್ಧಿಸಿ ಸುಮಾರು ಹದಿನೇಳು ಸಾವಿರ ಮತಗಳ ಅಂತರದಿಂದ ಗೆಲುವು ಸಾಧಿಸಿದ್ದ ನಾರಾಯಣ ಗೌಡ, ಆಪರೇಶನ್ ಕಮಲಕ್ಕೆ ಒಳಗಾಗಿ ಬಿಜೆಪಿಗೆ ಸೇರ್ಪಡೆಗೊಂಡಿದ್ದರು. 2019ರ ಚುನಾವಣೆಯಲ್ಲಿ ಬಿಜೆಪಿ ಟಿಕೆಟಿನಿಂದ ಸ್ಪರ್ಧಿಸಿ ಮತ್ತೆ ಗೆದ್ದಿದ್ದ ನಾರಾಯಣ ಗೌಡ ಸಚಿವರಾಗಿ ಈಗ ಕಾರ್ಯ ನಿರ್ವಹಿಸುತ್ತಿದ್ದಾರೆ. ಈಗ ಕ್ಷೇತ್ರದಲ್ಲಿ ಬಿಜೆಪಿಯ ನೆಲೆ ಗಟ್ಟಿಯಿಲ್ಲ ಎನ್ನುವುದನ್ನು ಅರಿತಿರುವ ನಾರಾಯಣ ಗೌಡ್ರು ಮತ್ತೆ ಕಾಂಗ್ರೆಸ್ ಸೇರ್ಪಡೆಗೊಳ್ಳಲಿದ್ದಾರೆ ಎನ್ನುವ ಸುದ್ದಿ ಹರಿದಾಡುತ್ತಿದೆ. ಕಳೆದ ಚುನಾವಣೆಯಲ್ಲಿ ಬಿ.ವೈ.ವಿಜಯೇಂದ್ರ ಮತ್ತು ತಂಡದ ವಿಶೇಷ ಪ್ರಯತ್ನದಿಂದ ನಾರಾಯಣ ಗೌಡ ಗೆಲುವನ್ನು ಸಾಧಿಸಿದ್ದರು.

ಯಲ್ಲಾಪುರ ಕ್ಷೇತ್ರದ ಶಾಸಕ, ಸಚಿವ ಅರೆಬೈಲು ಶಿವರಾಂ ಹೆಬ್ಬಾರ್

ನಾರಾಯಣ ಗೌಡರ ಹೆಸರಿನ ಜೊತೆಗೆ ಉತ್ತರ ಕನ್ನಡ ಜಿಲ್ಲೆ ಯಲ್ಲಾಪುರ ಕ್ಷೇತ್ರದ ಶಾಸಕ ಮತ್ತು ಸಚಿವರೂ ಆಗಿರುವ ಅರೆಬೈಲು ಶಿವರಾಂ ಹೆಬ್ಬಾರ್ ಅವರ ಹೆಸರೂ ಕಾಂಗ್ರೆಸ್ ಸೇರ್ಪಡೆಗೊಳ್ಳಲಿರುವ ಹೆಸರುಗಳಲ್ಲಿ ತುಳುಕು ಹಾಕುತ್ತಿದೆ. ಈ ವಿಚಾರವನ್ನು ಸಾರಸಗಾಟವಾಗಿ ಹೆಬ್ಬಾರ್ ಅವರ ನಿರಾಕರಿಸಿದ್ದರೂ ಕೂಡಾ ಮತ್ತೆ ಈ ವಿಚಾರ ಚರ್ಚೆಯ ವಿಷಯವಾಗುತ್ತಿದೆ. ಇತ್ತೀಚೆಗೆ ಕ್ಷೇತ್ರದ ಪ್ರಭಾವೀ ಮುಖಂಡ ವಿ.ಎಸ್.ಪಾಟೀಲ್ ಅವರು ಬಿಜೆಪಿ ತೊರೆದು ಕಾಂಗ್ರೆಸ್ ಸೇರಿದ್ದರು.

ಯಶವಂತಪುರ ಶಾಸಕ, ಸಚಿವ ಎಸ್.ಟಿ.ಸೋಮಶೇಖರ್

ಸಿದ್ದರಾಮಯ್ಯನವರ ಆಪ್ತ ವಲಯದಲ್ಲಿ ಗುರುತಿಸಿಕೊಂಡಿದ್ದ ಯಶವಂತಪುರ ಶಾಸಕ, ಸಚಿವ ಎಸ್.ಟಿ.ಸೋಮಶೇಖರ್ ಕಾಂಗ್ರೆಸ್ ಸೇರಲಿದ್ದಾರಾ? ಈ ರೀತಿಯ ಪ್ರಶ್ನೆ ರಾಜ್ಯ ರಾಜಕೀಯದಲ್ಲಿ ಹರಿದಾಡುತ್ತಿದೆ. ಕ್ಷೇತ್ರದಲ್ಲಿ ಯಾರನ್ನೂ ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿಗಳ ಪಟ್ಟಿಯಲ್ಲಿ ಸೇರ್ಪಡೆಗೊಳಿಸಿದೇ ದೆಹಲಿಗೆ ಕಳುಹಿಸಲಾಗಿದೆ ಎನ್ನುವ ಮಾತು ಕೇಳಿ ಬರುತ್ತಿದೆ. ಬಿಜೆಪಿ ಸೇರಿದ ನಂತರ ಪ್ರಭಲವಾಗಿರುವ ನಾಯಕರಲ್ಲಿ ಸೋಮಶೇಖರ್ ಕೂಡಾ ಒಬ್ಬರಾಗಿರುವುದರಿಂದ, ಅವರ ಕಾಂಗ್ರೆಸ್ ಸೇರ್ಪಡೆ ವಿಚಾರಕ್ಕೆ ಮುಂದಿನ ಕೆಲವೇ ದಿನಗಳಲ್ಲಿ ಸ್ಪಷ್ಟ ಉತ್ತರ ಸಿಗಲಿದೆ.


Spread the love

About Laxminews 24x7

Check Also

ಡಿಜಿಟಲ್ ಅರೆಸ್ಟ್ ಮೂಲಕ ಮಂಗಳೂರಿನ ಮಹಿಳೆಗೆ 3.15 ಕೋಟಿ ರೂಪಾಯಿ ವಂಚನೆ

Spread the loveಮಂಗಳೂರು: ಮಂಗಳೂರಿನ ಮಹಿಳೆಯೊಬ್ಬರು ಡಿಜಿಟಲ್ ಅರೆಸ್ಟ್ ಎಂಬ ಹೆಸರಿನಲ್ಲಿ ನಡೆದ ಆನ್‌ಲೈನ್ ವಂಚನೆಯಲ್ಲಿ 3 ಕೋಟಿ 15 ಲಕ್ಷ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ