ಧಾರವಾಡ: ‘ಅಧಿಕಾರ ಸಿಕ್ಕಾಗ ರಾಜ್ಯದ ಜನರು ಮತ್ತು ರೈತರ ಪರವಾಗಿ ಜೆಡಿಎಸ್ ಧ್ವನಿ ಎತ್ತಿದೆ. ಆದರೆ ಎಂದಿಗೂ ಬಿಜೆಪಿಯವರಂತೆ ಎಂದೂ ನರಹತ್ಯೆಯ ರಾಜಕೀಯ ಮಾಡಿಲ್ಲ’ ಎಂದು ಜೆಡಿಎಸ್ ಮುಖಂಡ ಎಚ್.ಡಿ.ಕುಮಾರಸ್ವಾಮಿ ಹೇಳಿದರು.
ನಗರದ ಮಹಾನಗರ ಪಾಲಿಕೆ ಕೇಂದ್ರ ಕಚೇರಿ ಆವರಣದಲ್ಲಿ ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ನಮಗೆ ಅಧಿಕಾರ ಸಿಕ್ಕಾಗ ರೈತರ ಸಾಲ ಮನ್ನಾ ಮಾಡಿದ್ದೇವೆ. ಪ್ರಾಮಾಣಿಕವಾಗಿ ಜನಗಳ ನೋವಿಗೆ ಸ್ಪಂದಿಸುವ ಕೆಲಸ ಮಾಡಿದ್ದೇವೆ. ಆದರೆ ಬಿಜೆಪಿ ನಾಯಕರಂತೆ ಅಮಾಯಕರನ್ನು ಬಲಿ ಪಡೆದು ರಾಜಕೀಯ ಮಾಡಿಲ್ಲ. ಹೀಗಾಗಿ ರಾಜ್ಯ ಹಾಗೂ ದೇಶದಲ್ಲಿ ಜನರು ಏನು ತೀರ್ಮಾನ ತೆಗೆದುಕೊಳ್ಳುತ್ತಾರೆ ಎಂಬುದನ್ನು ಕಾದು ನೋಡಿ’ ಎಂದರು.
‘ರಾಜ್ಯಕ್ಕೆ ಬಂದು ಬರೀ ಭಾಷಣ ಬಿಗಿಯುವ ಕೇಂದ್ರ ಗೃಹ ಸಚಿವ ಅಮಿತ್ ಶಾ, ಕರ್ನಾಟಕಕ್ಕಾಗಲಿ, ಇಲ್ಲಿನ ಜನತೆಗಾಗಲಿ ಏನಾದರೂ ಕೊಡುಗೆ ನೀಡಿದ್ದಾರೆಯೇ? ಮಹದಾಯಿ ಸಮಸ್ಯೆ ಸರಿಪಡಿಸಿದ್ದಾರಾ? ರಾಜ್ಯಕ್ಕೆ ಏನಾದರೂ ಕೊಡುಗೆ ಕೊಟ್ಟಿದ್ದಾರಾ?’ ಎಂದು ಪ್ರಶ್ನೆಗಳ ಸುರಿಮಳೆಗರೆದರು.
‘ರಾಜ್ಯದಲ್ಲಿ ಬಿಜೆಪಿ ವಿರುದ್ಧ ಜನ ರೊಚ್ಚಿಗೆದ್ದಿದ್ದಾರೆ. ಇಷ್ಟು ದಿನ ಏನೂ ಮಾಡದೇ ಚುನಾವಣೆಯ ಹಿನ್ನೆಲೆ ಕಾಟಾಚಾರಕ್ಕಾಗಿ ಮಹದಾಯಿ ಬಗ್ಗೆ ಘೋಷಣೆ ಮಾಡಿ, ಗೋವಾದವರಿಂದ ತಕರಾರು ತೆಗೆಸಿದ್ದಾರೆ. ಇಂಥವರಿಂದ ಕರ್ನಾಟಕದ ಜನತೆ ಏನು ನಿರೀಕ್ಷಿಸಲು ಸಾಧ್ಯವಿಲ್ಲ’ ಎಂದರು.