ಶಿರಸಿ: ಐಟಿ, ಬಿಟಿ ಎಂದರೆ ಬೃಹತ್ ನಗರಗಳಿಗಷ್ಟೇ ಸೀಮಿತ. ಅದು ಆ ನಗರದ ಹಾಗೂ ಕಂಪನಿಯ ಪ್ರತಿಷ್ಠೆಯ ಪ್ರಶ್ನೆಯೂ ಹೌದು ಎಂಬ ಭಾವನೆ ದೂರಗೊಳಿಸುವ ವಿದ್ಯಮಾನಕ್ಕೆ ಐಟಿ ಕಂಪನಿಯೊಂದು ಶ್ರೀಗಣೇಶ ಹಾಡಿದೆ.
ದಟ್ಟಾರಣ್ಯಗಳ ತವರೆಂದೇ ಖ್ಯಾತವಾದ ಉತ್ತರ ಕನ್ನಡ ಜಿಲ್ಲೆಯ ಶಿರಸಿ ತಾಲೂಕಿನ ಬೆಂಗಳೆ ಗ್ರಾಮದ ಒಡ್ಡಿನಕೊಪ್ಪದ ಹಸಿರ ಹೊದಿರಿನ ಮಧ್ಯೆ ಆಲ್ಟ್ ಡಿಜಿಟಲ್ ಟೆಕ್ನಾಲಜೀಸ್ ಎಂಬ ಕಂಪನಿ ಪಾದಾರ್ಪಣೆ ಮಾಡುವ ಮೂಲಕ ಹೊಸ ಬೆಳವಣಿಗೆಗೆ ನಾಂದಿ ಹಾಡಿದೆ.
ಐಟಿಯಲ್ಲಿ ಸಾಕಷ್ಟು ಹೆಸರುವಾಸಿಯಾಗಿರುವ ಈ ಕಂಪನಿಯ ಮುಖ್ಯ ಕಚೇರಿ ಇರುವುದು ನೊಯ್ಡಾದಲ್ಲಿ. ಕಂಪನಿ ಪ್ರಾರಂಭವಾಗಿದ್ದು 8 ವರ್ಷಗಳ ಹಿಂದೆ. ಎಲ್ಲ ಬಿಟ್ಟು ಒಡ್ಡಿನಕೊಪ್ಪ ಆಯ್ಕೆ ಮಾಡಿದ್ದೇಕೆ? ಎಂಬ ಪ್ರಶ್ನೆಗೂ ಉತ್ತರವಿದೆ. ಉತ್ತರ ಪ್ರದೇಶದ ವಿಕಾಸ ಗೋಯೆಲ್ ಈ ಕಂಪನಿಯ ಸಂಸ್ಥಾಪಕರು. ಇದರ ಸಹ ಸಂಸ್ಥಾಪಕ ಗೌತಮ್ ಬೆಂಗಳೆ ಅವರು ಬೆಂಗಳೆ ಗ್ರಾಮದವರೇ ಆಗಿರುವುದರಿಂದ ಇಲ್ಲಿ ಶಾಖೆ ತೆರೆಯಲಾಗಿದೆ.
ಐಟಿ ಕಂಪನಿಯ ಶಾಖೆ ಇರುವ ಜಾಗದಲ್ಲಿ ಈ ಮೊದಲು ರೆಸಾರ್ಟ್ ಒಂದು ನಡೆಯುತ್ತಿತ್ತು. ಅದೇ ರೆಸಾರ್ಟ್ ಕಟ್ಟಡವನ್ನು ಇದೀಗ ಐಟಿ ಕಚೇರಿಗೆ ಬದಲಾವಣೆಗೊಳಿಸಿಕೊಂಡಿದ್ದು 50 ಜನ ಕಾರ್ಯನಿರ್ವಹಿಸುವ ವ್ಯವಸ್ಥೆ, ಮೂಲಸೌಲಭ್ಯಗಳನ್ನು ಸಿದ್ಧಪಡಿಸಿಕೊಳ್ಳಲಾಗಿದ್ದು ಫೆ.11ರಂದು ಅಧಿಕೃತ ಆರಂಭಗೊಂಡಿದೆ.