ಬೀದರ್: ದೇಶದ ರಾಜಕೀಯ ಸ್ಥಿತಿ, ನ್ಯಾಯಾಂಗ, ಕಾರ್ಯಾಂಗ, ಶಾಸಕಾಂಗದ ಕುರಿತು ಮಕ್ಕಳಿಗೆ ಅರಿವು ಅಗತ್ಯ. ಮಕ್ಕಳಲ್ಲಿ ರಾಜಕೀಯ ಪ್ರಜ್ಞೆ ಬೆಳೆಸುವುದು ಎಲ್ಲರ ಕರ್ತವ್ಯ ಎಂದು ಬೀದರ್ ದಕ್ಷಿಣ ವಿಧಾನಸಭಾ ಕ್ಷೇತ್ರದ ಶಾಸಕರಾಗಿರುವ ಬಂಡೆಪ್ಪ ಖಾಶೆಂಪುರ್ ಹೇಳಿದರು.
ಬೀದರ್ ದಕ್ಷಿಣ ವಿಧಾನಸಭಾ ಕ್ಷೇತ್ರದ ಗುನ್ನಳ್ಳಿ ಗ್ರಾಮದ ಸರ್ಕಾರಿ ಪ್ರೌಢ ಶಾಲೆಯ ಆವರಣದಲ್ಲಿ ಕೆಕೆಆರ್ಡಿಬಿಯ 2022-23ನೇ ಸಾಲಿನ ಮೈಕ್ರೋ ಯೋಜನೆಯಡಿಯಲ್ಲಿ ಸುಮಾರು 35 ಲಕ್ಷ ರೂ. ವೆಚ್ಚದಲ್ಲಿ ನಿರ್ಮಾಣವಾಗುತ್ತಿರುವ ಆಡಿಟೋರಿಯಂ ಹಾಲ್ ಗೆ ಬುಧವಾರ ಶಿಲಾನ್ಯಾಸ ನೆರವೇರಿಸಿ ಮಾತನಾಡಿದರು.
ಬಸವಣ್ಣನವರ ಕಾಲದಲ್ಲಿ ಸಾಮಾಜಿಕ ಕ್ರಾಂತಿ ನಡೆಯಿತು. ಪ್ರಸ್ತುತ ಶಿಕ್ಷಣದಲ್ಲಿ ಕ್ರಾಂತಿಯಾಗಬೇಕಿದೆ. ಪ್ರತಿಯೊಬ್ಬ ತಂದೆ ತಾಯಿಗಳು ತಮ್ಮ ಮಕ್ಕಳಿಗೆ ಅತ್ಯುತ್ತಮ ಶಿಕ್ಷಣ ಕೊಡಿಸಬೇಕಾಗಿದೆ. ಕಲ್ಲೊಂದನ್ನು ಶಿಲ್ಪಿಯೂ ಶಿಲೆಯನ್ನಾಗಿ ಮಾಡಿದಂತೆ ಶಿಕ್ಷಕರು ಮಕ್ಕಳನ್ನು ಶಿಕ್ಷಣವಂತರನ್ನಾಗಿ ಮಾಡುತ್ತಾರೆ. ಮಕ್ಕಳು ವಜ್ರವಿದ್ದಂತೆ, ಶಿಕ್ಷಕರು ವಜ್ರವನ್ನು ಶೋಧಿಸಿ ತೆಗೆಯುವ ಕೆಲಸ ಮಾಡುತ್ತಾರೆ.
ಅತ್ಯುತ್ತಮ ಸಾಧನೆ ಮಾಡಿದ ಬಹುತೇಕ ಸಾಧಕರು ಗ್ರಾಮೀಣ ಭಾಗದ ಸರ್ಕಾರಿ ಶಾಲೆಗಳಲ್ಲೇ ಕಲಿತವರಾಗಿದ್ದಾರೆ. ನಮ್ಮ ಸರ್ಕಾರಿ ಶಾಲೆಗಳಲ್ಲಿ ಉತ್ತಮ ಶಿಕ್ಷಣ ದೊರೆಯುತ್ತದೆ. ಶಾಲೆಗಳಲ್ಲಿನ ಮೂಲಭೂತ ಸೌಕರ್ಯಗಳ ಕೊರತೆ ನಿವಾರಿಸುವ ಕೆಲಸವನ್ನು ಎಲ್ಲರೂ ಸೇರಿ ಮಾಡಬೇಕಾಗಿದೆ. ಗುನ್ನಳ್ಳಿ ಶಾಲೆಯಲ್ಲಿನ ನೀರಿನ ಕೊರತೆ ನಿವಾರಿಸುವ ಮತ್ತು ಶೌಚಾಲಯ ನಿರ್ಮಿಸಿ ಕೊಡುವ ಕೆಲಸವನ್ನು ಶೀಘ್ರದಲ್ಲೇ ಮಾಡಿಸಿಕೊಡುತ್ತೇನೆ.