ಬೆಳಗಾವಿ: ಮಹಾರಾಷ್ಟ್ರದ ರಾಜ್ಯಸಭೆ ಸದಸ್ಯ ಹಾಗೂ ಶಿವಸೇನೆ ರಾಜ್ಯ ವಕ್ತಾರ ಸಂಜಯ್ ರಾವುತ್ ಸೇರಿದಂತೆ ಇಬ್ಬರಿಗೆ ಇಲ್ಲಿನ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಬುಧವಾರ ಷರತ್ತುಬದ್ಧ ಜಾಮೀನು ನೀಡಿದೆ.
2018ರ ಮಾರ್ಚ್ 30ರಂದು ಇಲ್ಲಿನ ಭಾಗ್ಯ ನಗರದ ರಾಮನಾಥ ಮಂಗಲ ಕಾರ್ಯಾಲಯದಲ್ಲಿ ವೆಬ್‌ಸೈಟ್‌ವೊಂದರ ವಾರ್ಷಿಕೋತ್ಸವ ಅಂಗವಾಗಿ ಆಯೋಜಿಸಿದ್ದ ಸಾರ್ವಜನಿಕ ಸಭೆಯಲ್ಲಿ ಸಂಜಯ ರಾವುತ್ ಕನ್ನಡಿಗರ ವಿರುದ್ಧ ಪ್ರಚೋದನಕಾರಿ ಭಾಷಣ ಮಾಡಿದ್ದರು.
ರಾವುತ್, ಬೆಳಗಾವಿಯ ಪತ್ರಕರ್ತರಾದ ಕಿರಣ್ ಠಾಕೂರ, ಪ್ರಕಾಶ ಬಿಳಗೋಜಿ, ರಾಮನಾಥ ಮಂಗಲ ಕಾರ್ಯಾಲಯದ ಮಾಲೀಕ ಸುರೇಂದ್ರ ನಾಯಿಕ ವಿರುದ್ಧ ಟಿಳಕವಾಡಿ ಠಾಣೆ ಪೊಲೀಸರು ‘ಚುನಾವಣಾ ನೀತಿ ಸಂಹಿತೆ ಉಲ್ಲಂಘನೆ’ ದೂರು ದಾಖಲಿಸಿದ್ದರು. ಡಿಸೆಂಬರ್ 1ರಂದು ವಿಚಾರಣೆಗೆ ಹಾಜರಾಗುವಂತೆ ನಾಲ್ವರಿಗೂ ನ್ಯಾಯಾಲಯ ಸಮನ್ಸ್ ಜಾರಿಗೊಳಿಸಿತ್ತು. ಆದರೆ, ವೈಯಕ್ತಿಕ ಕಾರಣದಿಂದ ಅವರು ಹಾಜರಾಗದ್ದರಿಂದ ವಿಚಾರಣೆ ಮುಂದೂಡಿ ಆದೇಶ ಹೊರಡಿಸಿತ್ತು.
ಬುಧವಾರ ಸಂಜಯ್ ರಾವುತ್ ಹಾಗೂ ಪತ್ರಕರ್ತ ಪ್ರಕಾಶ ಬಿಳಗೋಜಿ ಅವರಿಗೆ ಷರತ್ತುಬದ್ಧ ಜಾಮೀನು ಮಂಜೂರುಗೊಳಿಸಲಾಗಿದೆ.
ಅವರ ಪರವಾಗಿ ವಕೀಲರಾದ ಶಾಮಸುಂದರ ಪತ್ತಾರ್, ಮಾರುತಿ ಕಾಮನ್ನಾಚೆ, ಹೇಮರಾಜ್ ಬೆಂಚನ್ನವರ, ಶಂಕರ ಬಾಳಾನಾಯ್ಕ ವಕಾಲತ್ತು ವಹಿಸಿದ್ದರು.
Laxmi News 24×7