ಈ ಬಾರಿ ಲಾಲ್ಬಾಗ್ ಪುಷ್ಪ ಪ್ರದರ್ಶನವು ಜನವರಿ 20 ರಂದು ಪ್ರಾರಂಭವಾಗಲಿದ್ದು, ಈ ವರ್ಷ ಬೆಂಗಳೂರಿನ ಶ್ರೀಮಂತ ಇತಿಹಾಸವನ್ನು ಥೀಮ್ ಆಗಿ ಬಳಸಿಕೊಳ್ಳಲು ನಿರ್ಧರಿಸಲಾಗಿದೆ. ಈ ಕುರಿತು ಮಾಹಿತಿ ನೀಡಿರುವ ತೋಟಗಾರಿಕಾ ಸಚಿವ ಮುನಿರತ್ನ ಅವರು, ಈ ಬಾರಿಯ ಫಲಪುಷ್ಪ ಪ್ರದರ್ಶನದ ಬೆಂಗಳೂರಿನ ಇತಿಹಾಸ ಹೇಳಲಿದ್ದು, ಕೆಂಪೇಗೌಡ, ಟಿಪ್ಪು ಸುಲ್ತಾನ್, ನಾಲ್ವಡಿ ಕೃಷ್ಣರಾಜ ಒಡೆಯರ್ ಬೆಂಗಳೂರಿಗೆ ನೀಡಿದ ಕೊಡುಗೆಯನ್ನು ಪ್ರದರ್ಶಿಸಲಾಗುತ್ತದೆ ಎಂದು ಹೇಳಿದ್ದಾರೆ. ಕೊಲಂಬಿಯಾ, ಕೀನ್ಯಾ, ನೆದರ್ಲ್ಯಾಂಡ್ಸ್, ಇಸ್ರೇಲ್, ಆಸ್ಟ್ರೇಲಿಯಾ ಸೇರಿದಂತೆ 11 ದೇಶಗಳ ಹೂವುಗಳು ಪ್ರದರ್ಶನದಲ್ಲಿರಲಿವೆ, ತಮಿಳುನಾಡು, ಕೇರಳ, ಮಹಾರಾಷ್ಟ್ರ, ಆಂಧ್ರಪ್ರದೇಶ ಮತ್ತು ಸಿಕ್ಕಿಂ ಸೇರಿದಂತೆ ಐದು ರಾಜ್ಯಗಳ ಹೂವುಗಳು ಕೂಡ ಪ್ರದರ್ಶನಗೊಳ್ಳಲಿವೆ ಎಂದು ತಿಳಿಸಿದ್ದಾರೆ. ಗರ್ಬೆರಾ, ಸಿಂಬಿಡಿಯಮ್ ಆರ್ಕಿಡ್ಗಳು, ಕಾರ್ನೇಷನ್ಗಳು, ಲಿಲ್ಲಿಗಳು ಮತ್ತು ಇತರ ತಳಿಗಳಂತಹ ಹೂವುಗಳನ್ನು ಪ್ರದರ್ಶಿಸಲಾಗುತ್ತದೆ.
ಅಲ್ಲದೆ, ಗ್ಲಾಸ್ ಹೌಸ್ನಲ್ಲಿ ಬೋನ್ಸಾಯ್ ಮರಗಳು, ಅಪರೂಪದ ಹಣ್ಣುಗಳು ಮತ್ತು ತರಕಾರಿಗಳ ಜೋಡಣೆಯೊಂದಿಗೆ ಹೂವಿನ ಪಿರಮಿಡ್ಗಳನ್ನು ರಚಿಸಲಾಗುವುದು. ಜನವರಿ 20 ರಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಕಾರ್ಯಕ್ರಮವನ್ನು ಉದ್ಘಾಟಿಸಲಿದ್ದು, ಜನವರಿ 30 ರಂದು ಮುಕ್ತಾಯಗೊಳ್ಳಲಿದೆ. 700 ಕ್ಕೂ ಹೆಚ್ಚು ಜನರು ಫಲಪುಷ್ಪ ಪ್ರದರ್ಶನ ಸ್ಪರ್ಧೆಯಲ್ಲಿ ಭಾಗವಹಿಸಲಿದ್ದು, ಜನವರಿ 28 ರಂದು ವಿಜೇತರಿಗೆ ಬಹುಮಾನ ನೀಡಲಾಗುವುದು ಎಂದು ಮಾಹಿತಿ ನೀಡಿದ್ದಾರೆ.