ಬೆಂಗಳೂರು: ರಾಜ್ಯದಲ್ಲಿ ಮೀಸಲಾತಿ ಸಂಬಂಧ ವಿವಿಧ ಸಮುದಾಯಗಳ ಹೋರಾಟ ನಡೆಯುತ್ತಿದ್ದು, ಇದೀಗ ಇದೇ ವಿಚಾರವಾಗಿ ಇನ್ನೊಂದು ಸಮುದಾಯ ಹೋರಾಟ ತೀವ್ರಗೊಳಿಸಲು ನಿರ್ಧರಿಸಿದೆ. ಮಾತ್ರವಲ್ಲ, ಪ್ರತಿಭಟನೆ ನಡೆಸಿ ಸರ್ಕಾರಕ್ಕೆ ಎಚ್ಚರಿಕೆಯನ್ನೂ ನೀಡಿದೆ.
ಬಲಿಜ ಸಮುದಾಯಕ್ಕೆ ಪೂರ್ಣ ಪ್ರಮಾಣದಲ್ಲಿ ಪ್ರವರ್ಗ ‘2ಎ’ ಮೀಸಲಾತಿ ಕಲ್ಪಿಸುವಂತೆ ಒತ್ತಾಯಿಸಿ ಕರ್ನಾಟಕ ರಾಜ್ಯ ಬಲಿಜ ಸಂಘ ಸೋಮವಾರ ಸ್ವಾತಂತ್ರ್ಯ ಉದ್ಯಾನದಲ್ಲಿ ಪ್ರತಿಭಟನೆ ನಡೆಸಿತ್ತು.
ರಾಜ್ಯದ ಮೂಲೆ ಮೂಲೆಗಳಿಂದ ಆಗಮಿಸಿದ್ದ ಪ್ರತಿಭಟನಾಕಾರರು ನಮ್ಮಿಂದ ಕಸಿದುಕೊಂಡಿರುವ 2ಎ ಮೀಸಲಾತಿ ವಾಪಸ್ ನೀಡಬೇಕು. ವೆಂಕಟಸ್ವಾಮಿ ಆಯೋಗ, ಚಿನ್ನಪ್ಪರೆಡ್ಡಿ ಆಯೋಗ ಹಾಗೂ ಹಾವನೂರು ಆಯೋಗದ ಶಿಫಾರಸ್ಸು ವರದಿಯಂತೆ ಮೀಸಲಾತಿ ಕಲ್ಪಿಸಬೇಕು. ಸಾಮಾಜಿಕವಾಗಿ, ಆರ್ಥಿಕವಾಗಿ, ಶೈಕ್ಷಣಿಕವಾಗಿ ಮುಂಚೂಣಿಗೆ ಬರಬೇಕೆಂದರೆ ಸೂಕ್ತ ಮೀಸಲಾತಿ ನೀಡಬೇಕೆಂದು ಸರ್ಕಾರಕ್ಕೆ ಒತ್ತಾಯಿಸಿದರು.
ಸಮುದಾಯಕ್ಕೆ ಶೈಕ್ಷಣಿಕವಾಗಿ ‘2ಎ’ ಮೀಸಲಾತಿ ನೀಡಿದ್ದು, ಉದ್ಯೋಗ ಮತ್ತು ರಾಜಕೀಯದಲ್ಲಿ ಪ್ರವರ್ಗ ‘3ಎ’ ಮೀಸಲಾತಿ ಕಲ್ಪಿಸಲಾಗಿದೆ. ದೇಶದಲ್ಲೇ ಇಂಥ ಅರ್ಧಂಬರ್ಧ ಮೀಸಲಾತಿ ನೀಡಲಾಗಿದೆ. ರಾಜ್ಯ ಸರ್ಕಾರ ಬೇರೆ ಬೇರೆ ಸಮುದಾಯಗಳಿಗೆ ಮೀಸಲಾತಿಯಲ್ಲಿ ಸೂಕ್ತ ಪ್ರಾತಿನಿಧ್ಯ ನೀಡಲು ಮುಂದಾಗಿರುವುದು ಸ್ವಾಗತಾರ್ಹ. ಅದರಂತೆ, ಹಿಂದುಳಿದಿರುವ ಬಲಿಜ ಸಮುದಾಯಕ್ಕೂ ಮೀಸಲಾತಿ ಕಲ್ಪಿಸಬೇಕು. ಇದು ಹಲವು ವರ್ಷಗಳ ಪ್ರಮುಖ ಬೇಡಿಕೆ ಎಂದು ಸಮುದಾಯದವರು ಆಗ್ರಹಿಸಿದರು.