ತುಮಕೂರು: ಮುಂದಿನ ವಿಧಾನಸಭೆ ಚುನಾವಣೆ ದೃಷ್ಟಿಯಿಂದ ಹಳೆ ಮೈಸೂರು ಪ್ರದೇಶವನ್ನು ಕೇಂದ್ರೀಕರಿಸಿರುವ ಬಿಜೆಪಿಯವರು, ಉತ್ತರ ಕರ್ನಾಟಕದ ಎಲ್ಲಾ ಪ್ರದೇಶಗಳನ್ನು ಗೆದ್ದಾಯಿತೆ?
ಎಂದು ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಪ್ರಶ್ನಿಸಿದರು.
ತುರುವೇಕೆರೆಯಲ್ಲಿ ಬುಧವಾರ ಕಾಂಗ್ರೆಸ್ ಕಾರ್ಯಕರ್ತರ ಸಮಾವೇಶಕ್ಕೂ ಮುನ್ನ ಸುದ್ದಿಗಾರರೊಂದಿಗೆ ಮಾತನಾಡಿದರು. ಹಳೆ ಮೈಸೂರು ಪ್ರದೇಶಗಳನ್ನು ಗೆಲ್ಲುತ್ತೇವೆ ಎಂದು ಬೀಗುತ್ತಿದ್ದಾರೆ. ಇಲ್ಲಿನ ಜನರು ಬಿಜೆಪಿ ಮಾತಿಗೆ ಮಣೆ ಹಾಕುವುದಿಲ್ಲ. ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ, ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ಯಾರೇ ಬಂದರೂ ಸರ್ಕಾರದ ಮೇಲಿರುವ ವಿರೋಧಿ ಅಲೆಯನ್ನು ತಡೆಯಲು ಸಾಧ್ಯವಿಲ್ಲ ಎಂದು ಹೇಳಿದರು.
ಬಿಜೆಪಿ ಎಂದರೆ ಸುಳ್ಳಿನ ಕಾರ್ಖಾನೆ. 2018ರಲ್ಲಿ 600 ಭರವಸೆ ಕೊಟ್ಟಿದ್ದರು. ಅದರಲ್ಲಿ ಶೇ 10ರಷ್ಟು ಕೆಲಸ ಮಾಡಿಲ್ಲ. ನೀರಾವರಿಗೆ ₹150 ಲಕ್ಷ ಕೋಟಿ ಖರ್ಚು ಮಾಡುವುದಾಗಿ ಹೇಳಿದ್ದರು. ಈವರೆಗೆ ₹45 ಲಕ್ಷ ಕೋಟಿಯಷ್ಟೂ ಖರ್ಚು ಮಾಡಿಲ್ಲ. ಅವರು ಹೇಳಿದಂತೆ ನಡೆದುಕೊಳ್ಳುವುದಿಲ್ಲ. ಸುಳ್ಳಿನ ಸರ್ಕಾರವನ್ನು ಜನರು ಮತ್ತೊಮ್ಮೆ ಒಪ್ಪುತ್ತಾರೆಯೆ? ಎಂದರು.