ಕಿತ್ತೂರು ತಾಲೂಕಿನ ಶಿವನೂರು ಗ್ರಾಮದಲ್ಲಿ ಬಸ್ ವ್ಯವಸ್ಥೆ ಇಲ್ಲದ್ದಕ್ಕೆ ನಡೆದುಕೊಂಡು ಹೋಗುವಾಗ ವಿದ್ಯಾರ್ಥಿನಿ ಅಪಘಾತದಲ್ಲಿ ಸಾವನ್ನಪ್ಪಿರುವ ಘಟನೆಗೆ ವ್ಯಾಪಕ ಟೀಕೆ ವ್ಯಕ್ತವಾಗಿದೆ.
ಮೃತ ವಿದ್ಯಾರ್ಥಿನಿ ಅಕ್ಷತಾ ಹೂಲಿಕಟ್ಟಿ ಮೃತದೇಹ ಶಿವನೂರು ತಲುಪುತ್ತಿದ್ದಂತೆ ಕುಟುಂಬಸ್ಥರು ಮತ್ತು ಗ್ರಾಮಸ್ಥರ ಆಕ್ರಂದನ ಮುಗಿಲು ಮುಟ್ಟಿತ್ತು. ಸರ್ಕಾರಕ್ಕೆ ಹಿಡಿಶಾಪ ಹಾಕಿ ನೂರಾರು ಮಹಿಳೆಯರು ಕಣ್ಣೀರುಡುತ್ತಿರುವ ದೃಶ್ಯ ಎಲ್ಲರು ಕರುಳು ಚುರ್ ಎನ್ನುವಂತಿತ್ತು.
ಮೃತ ವಿದ್ಯಾರ್ಥಿನಿ ಕುಟುಂಬಕ್ಕೆ 25 ಲಕ್ಷ ಪರಿಹಾರ ನೀಡುವಂತೆ ಹಾಗೂ ಶಿವನೂರು ಗ್ರಾಮಕ್ಕೆ ಸಮರ್ಪಕ ಬಸ್ ವ್ಯವಸ್ಥೆ ಕಲ್ಪಿಸುವಂತೆಯೂ ಒತ್ತಾಯಿಸಿ ಶಿವನೂರು ಗ್ರಾಮದಲ್ಲಿ ಎರಡೂವರೆ ಗಂಟೆಗೂ ಹೆಚ್ಚು ಕಾಲ ಪ್ರತಿಭಟನೆ ನಡೆಸಲಾಯಿತು. ಮೃತ ಅಕ್ಷಿತಾ ಭಾವಚಿತ್ರ ಹಿಡಿದು ಕಣ್ಣೀರಿಡುತ್ತಾ ಪ್ರತಿಭಟನೆ ನಡೆಸಲಾಯಿತು.
ಮಾಜಿ ಶಾಸಕ ಡಿ. ಬಿ. ಇನಾಮದಾರ, ಮಾಜಿ ಜಿ.ಪಂ.ಸದಸ್ಯರಾದ ಬಾಬಾಸಾಹೇಬ ಪಾಟೀಲ, ರೋಹಿಣಿ ಪಾಟೀಲ ಸೇರಿದಂತೆ ಇನ್ನಿತರ ನಾಯಕರು ಪ್ರತಿಭಟನೆಯಲ್ಲಿ ಭಾಗಿಯಾಗಿದ್ದರು.
ಶಿವನೂರು ಗ್ರಾಮಕ್ಕೆ ಸಮರ್ಪಕ ಬಸ್‌ಗೆ ಆಗ್ರಹಿಸಿ ಹಲವು ಬಾರಿ ಮನವಿ ಸಲ್ಲಿಸಲಾಗಿತ್ತು. 15 ದಿನಗಳ ಹಿಂದೆಯಷ್ಟೇ ಶಾಸಕ ಮಹಾಂತೇಶ ದೊಡ್ಡಗೌಡರಗೂ ವಿದ್ಯಾರ್ಥಿಗಳು ಮನವಿ ಸಲ್ಲಿಸಿದ್ದರು.
Laxmi News 24×7