Breaking News

ಕರ್ನಾಟಕದ ವಿರುದ್ಧ ಮಹಾರಾಷ್ಟ್ರದ ನಿರ್ಣಯಕ್ಕೆ ರಾಜ್ಯದಲ್ಲಿ ರೋಷಾಗ್ನಿ

Spread the love

ನಾಗ್ಪುರ/ಬೆಳಗಾವಿ: ಬೆಳಗಾವಿ ಗಡಿ ವಿವಾದದ ವಿಚಾರದಲ್ಲಿ ನಿರಂತರವಾಗಿ ಕನ್ನಡಿಗರನ್ನು ಕೆರಳಿಸುತ್ತಿರುವ ಮಹಾರಾಷ್ಟ್ರ, ಈಗ “ನಿರ್ಣಯ’ದ ಮೂಲಕ ಕರ್ನಾಟಕವನ್ನು ಕೆಣಕಿದೆ.

ಮಂಗಳವಾರ ಮಹಾರಾಷ್ಟ್ರ ವಿಧಾನಸಭೆ ಹಾಗೂ ವಿಧಾನ ಪರಿಷತ್‌ನಲ್ಲಿ ಕರ್ನಾಟಕದ ವಿರುದ್ಧ ನಿರ್ಣಯಗಳನ್ನು ಅಂಗೀಕರಿಸಲಾಗಿದ್ದು, ಇದಕ್ಕೆ ರಾಜ್ಯದಲ್ಲಿ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ.

ಜತೆಗೆ, ಗಡಿ ತಂಟೆ ಕುರಿತು ಮಹಾರಾಷ್ಟ್ರದ ವರ್ತನೆ ವಿರುದ್ಧ ರಾಜ್ಯ ವಿಧಾನ ಪರಿಷತ್‌ನಲ್ಲಿ ಸರ್ವಾನುಮತ ನಿರ್ಣಯವನ್ನು ಕೈಗೊಳ್ಳಲಾಗಿದೆ.

ರಾಜ್ಯದ ಹಿತಾಸಕ್ತಿಯನ್ನು ರಕ್ಷಿಸುವ ನಿಟ್ಟಿನಲ್ಲಿ ಕರ್ನಾಟಕ ಸರಕಾರವು ಇತ್ತೀಚೆಗೆ ವಿಧಾನಸಭೆಯಲ್ಲಿ ನಿರ್ಣಯ ಅಂಗೀಕರಿಸಿತ್ತು. ಇದಕ್ಕೆ ಪ್ರತಿಯಾಗಿ ಎನ್ನುವಂತೆ ಉದ್ಧಟತನ ಮೆರೆದಿರುವ ಮಹಾರಾಷ್ಟ್ರ ಸರಕಾರವು ಮಂಗಳವಾರ, “ಕರ್ನಾಟಕದ 865 ಮರಾಠಿ ಭಾಷಿಕ ಗ್ರಾಮಗಳನ್ನು “ಕಾನೂನಾತ್ಮಕ’ವಾಗಿ ಮಹಾರಾಷ್ಟ್ರದೊಂದಿಗೆ ವಿಲೀನಗೊಳಿಸುವ ನಿರ್ಣಯ’ ವನ್ನು ಸರ್ವಾನುಮತ ದಿಂದ ಅಂಗೀಕರಿಸಿತು. ವಿಧಾನಪರಿಷತ್‌ನಲ್ಲೂ ಅನು ಮೋದಿಸಲಾಯಿತು. ಜತೆಗೆ ಗಡಿ ಭಾಗದಲ್ಲಿ ವಾಸಿಸುವ ಮರಾಠಿ ಭಾಷಿಕರ ಸುರಕ್ಷತೆಗೆ ಕರ್ನಾಟಕ ಸರಕಾರ ಖಾತ್ರಿ ನೀಡುವಂತೆ ಕೇಂದ್ರ ಸರಕಾರ ನಿರ್ದೇಶಿಸಬೇಕು ಎಂದೂ ಆಗ್ರಹಿಸ ಲಾಗಿದೆ. ಎರಡೂ ಕಡೆ ಮುಖ್ಯಮಂತ್ರಿ ಏಕನಾಥ ಶಿಂಧೆ ಅವರೇ ನಿರ್ಣಯವನ್ನು ಮಂಡಿಸಿದ್ದಾರೆ.

“ಬೆಳಗಾವಿ, ಕಾರವಾರ, ನಿಪ್ಪಾಣಿ, ಬೀದರ್‌, ಭಾಲ್ಕಿ ನಗರಗಳು ಮತ್ತು 865 ಹಳ್ಳಿಗಳ ಮರಾಠಿ ಭಾಷಿಕರೊಂದಿಗೆ ಮಹಾರಾಷ್ಟ್ರ ಸರಕಾರ ನಿಲ್ಲುತ್ತದೆ. ಸುಪ್ರೀಂಕೋರ್ಟ್‌ನಲ್ಲಿ ಕಾನೂನಾತ್ಮಕವಾಗಿ ಹೋರಾ ಡುತ್ತೇವೆ. ಕರ್ನಾಟಕವು ಮರಾಠಿ ಭಾಷಿಕರ ವಿರುದ್ಧ ದಮನಕಾರಿ ನೀತಿಯನ್ನು ಅನುಸರಿಸುತ್ತಿದೆ’ ಎಂದು ಹೇಳಲಾಗಿದೆ. ಇತ್ತೀಚೆಗೆ ಕೇಂದ್ರ ಸಚಿವ ಅಮಿತ್‌ ಶಾ ನೀಡಿರುವ ಸೂಚನೆಯನ್ನು ಪಾಲಿಸುವಂತೆ ಕರ್ನಾಟಕ ಸರಕಾರಕ್ಕೆ ಕೇಂದ್ರ ಸರಕಾರ ಸೂಚಿಸುವಂತೆಯೂ ಒತ್ತಾಯಿಸಲಾಗಿದೆ.

ಪರಿಷತ್‌ನಲ್ಲಿ ಮಾರ್ದನಿ
ಅತ್ತ ಮಹಾರಾಷ್ಟ್ರ ಸರಕಾರ ನಿರ್ಣಯ ಅಂಗೀ ಕರಿಸುತ್ತಿದ್ದಂತೆ, ಇತ್ತ ಬೆಳಗಾವಿಯ ವಿಧಾನಮಂಡಲ ಕಲಾಪದಡಿ ವಿಧಾನ ಪರಿ ಷತ್‌ನಲ್ಲಿ ಪ್ರಸ್ತಾವಗೊಂಡಿತು. ಪಕ್ಷ ಭೇದ ಮರೆತು ಮಹಾರಾಷ್ಟ್ರದ ವರ್ತನೆ, ನಿಲುವನ್ನು ಖಂಡಿಸ ಲಾಯಿತು. ಮುಖ್ಯಮಂತ್ರಿಗಳ ಪರವಾಗಿ ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಜೆ.ಸಿ.ಮಾಧುಸ್ವಾಮಿ ಖಂಡನ ನಿರ್ಣಯ ಮಂಡಿಸಿದರು. ನಮ್ಮ ನೆಲ, ಜಲ, ಭಾಷೆ ಹಾಗೂ ಕನ್ನಡಿಗರ ಹಿತಾಸಕ್ತಿ ವಿಷಯದಲ್ಲಿ ರಾಜಿ ಇಲ್ಲ. ಜನರ ಭಾವನೆಗೆ ಧಕ್ಕೆ ಬಂದಾಗ ಒಗ್ಗಟ್ಟಿನ ಧ್ವನಿ ಮೊಳಗಿಸಲು ನಾವೆಲ್ಲ ಬದ್ಧ ಎಂದರು.
ಇದಕ್ಕೂ ಮೊದಲು ಚರ್ಚೆಯಲ್ಲಿ ಪಾಲ್ಗೊಂಡ ಆಡಳಿತ- ವಿಪಕ್ಷಗಳ ಹಲವು ಸದಸ್ಯರು ಮಹಾ ರಾಷ್ಟ್ರ, ಎಂಇಎಸ್‌, ಶಿವಸೇನೆಯ ವರ್ತನೆ ಯನ್ನು ಖಂಡಿಸಿದರು. ಮಹಾರಾಷ್ಟ್ರದವರು ತಮ್ಮ ರಾಜಕೀಯ ಅನುಕೂಲಕ್ಕಾಗಿ ಪದೇ ಪದೆ ತಂಟೆ ತೆಗೆಯುತ್ತಿದ್ದು, ಖಂಡಿಸೋಣ ಎಂದು ಅಭಿಪ್ರಾಯ ಪಟ್ಟರು. ಎಂಇಎಸ್‌ ನಿಷೇಧಕ್ಕೂ ಒತ್ತಾಯಿಸಿದರು.

ಸೋಮವಾರವಷ್ಟೇ ಮಹಾರಾಷ್ಟ್ರ ವಿಧಾನಸಭೆಯಲ್ಲಿ ಬೆಳಗಾವಿ, ನಿಪ್ಪಾಣಿ, ಕಾರವಾರಗಳನ್ನು ಕೇಂದ್ರಾ ಡಳಿತ ಪ್ರದೇಶಗಳೆಂದು ಘೋಷಿಸುವಂತೆ ಶಿವ ಸೇನೆ ನಾಯಕ ಉದ್ಧವ್‌ ಠಾಕ್ರೆ ಒತ್ತಾಯಿಸಿದ್ದರು. ಡಿಸಿಎಂ ದೇವೇಂದ್ರ ಫ‌ಡ್ನವೀಸ್‌ ಕೂಡ ರಾಜ್ಯದ ಒಂದು ಇಂಚು ಜಮೀನನ್ನೂ ಬಿಟ್ಟುಕೊಡುವುದಿಲ್ಲ ಎಂದು ಹೇಳಿದ್ದರು. ಈ ಎಲ್ಲ ಬೆಳವಣಿಗೆಗಳು ಕೇಂದ್ರ ಗೃಹ ಸಚಿವ ಅಮಿತ್‌ ಶಾ ಅವರ ಮಧ್ಯಪ್ರವೇಶದ ಹೊರತಾಗಿಯೂ ಸಂಘರ್ಷ ಮತ್ತಷ್ಟು ಉಲ್ಬಣಿಸಲು ಕಾರಣವಾಗುವ ಸಂಭವವಿದೆ.

ಮಹಾರಾಷ್ಟ್ರ ನಿರ್ಣಯಕ್ಕೆ ಬೆಲೆ ಇಲ್ಲ : ಮುಖ್ಯಮಂತ್ರಿ
ಮಹಾರಾಷ್ಟ್ರದ ಖಂಡನ ನಿರ್ಣಯಕ್ಕೆ ಯಾವುದೇ ಬೆಲೆ ಇಲ್ಲ. ಸಂವಿಧಾನದಲ್ಲಿ ಇದಕ್ಕೆ ಅವಕಾಶವಿಲ್ಲ ಎಂದು ಮುಖ್ಯಮಂತ್ರಿ ಬಸವ ರಾಜ ಬೊಮ್ಮಾಯಿ ಹೇಳಿದ್ದಾರೆ.


Spread the love

About Laxminews 24x7

Check Also

ಚಾತುರ್ಮಾಸ ಹಿನ್ನೆಲೆ ಜೈನ ಮುನಿ ಶಿಷ್ಯೆಯರ ಪುರಪ್ರವೇಶ ಬೆಳಗಾವಿ ಜೈನ ಸಮಾಜದಿಂದ ಭವ್ಯ ಮೆರವಣಿಗೆಯೊಂದಿಗೆ ಸ್ವಾಗತ

Spread the love ಚಾತುರ್ಮಾಸ ಹಿನ್ನೆಲೆ ಜೈನ ಮುನಿ ಶಿಷ್ಯೆಯರ ಪುರಪ್ರವೇಶ ಬೆಳಗಾವಿ ಜೈನ ಸಮಾಜದಿಂದ ಭವ್ಯ ಮೆರವಣಿಗೆಯೊಂದಿಗೆ ಸ್ವಾಗತ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ