ರಾಣೆಬೆನ್ನೂರು (ಹಾವೇರಿ): ಬೆಂಗಳೂರಿನ ರೆಸಾರ್ಟ್‌ನಲ್ಲಿ 40 ದಿನ ತಂಗಿದ್ದ ತಾಲ್ಲೂಕಿನ ದೇವರಗುಡ್ಡ ಗ್ರಾಮ ಪಂಚಾಯಿತಿಯ 9 ಸದಸ್ಯರು ವಿಮಾನದಲ್ಲಿ ಹುಬ್ಬಳ್ಳಿಗೆ ಬಂದಿದ್ದು, ಮಂಗಳವಾರ ಅವಿಶ್ವಾಸ ನಿರ್ಣಯ ಮಂಡನೆಯಲ್ಲಿ ಪಾಲ್ಗೊಂಡರು.
ಗ್ರಾಮ ಪಂಚಾಯಿತಿ ಸದಸ್ಯ ಬಲ 13 ಆಗಿದ್ದು, ಅಧಿಕಾರಕ್ಕಾಗಿ ಎರಡು ಗುಂಪುಗಳ ನಡುವೆ ಜಟಾಪಟಿ ನಡೆದಿತ್ತು.
ಗ್ರಾ.ಪಂ. ಅಧ್ಯಕ್ಷ ಮಾಲತೇಶ ನಾಯರ್ ವಿರುದ್ಧ ಅವಿಶ್ವಾಸ ನಿರ್ಣಯ ಮಂಡನೆಯಾಗಿದ್ದು, ಹೊಸ ಅಧ್ಯಕ್ಷರ ಆಯ್ಕೆ ಪ್ರಕ್ರಿಯೆ ಬಾಕಿ ಉಳಿದಂತಾಗಿದೆ.
ಮಾಲತೇಶ ನಾಯರ್ 15 ತಿಂಗಳ ನಂತರ ಸದಸ್ಯ ಸುರೇಶ ತಳಗೇರಿ ಅವರಿಗೆ ಅಧ್ಯಕ್ಷ ಸ್ಥಾನ ಬಿಟ್ಟುಕೊಡುವ ಒಪ್ಪಂದವಾಗಿತ್ತು. ಆದರೆ, ಅವರು ಬಿಟ್ಟುಕೊಡಲಿಲ್ಲ. ಅವಿಶ್ವಾಸ ಮಂಡನೆ ವೇಳೆ ಸದಸ್ಯರನ್ನು ಸೆಳೆಯಬಹುದು ಎಂದು ಸದಸ್ಯರನ್ನು ಬೆಂಗಳೂರಿಗೆ ಕಳುಹಿಸಲಾಗಿತ್ತು’ ಎಂದು ಗ್ರಾಮ ಪಂಚಾಯಿತಿ ಆಡಳಿತದಲ್ಲಿ ಪ್ರಭಾವವುಳ್ಳ ಮಾಲತೇಶ ಸ್ವಾಮಿ ದೇವಸ್ಥಾನದ ಪ್ರಧಾನ ಅರ್ಚಕ ಸಂತೋಷ ಭಟ್ ಗುರೂಜಿ ‘ಪ್ರಜಾವಾಣಿ’ಗೆ ತಿಳಿಸಿದರು. ಉಪವಿಭಾಗಾಧಿಕಾರಿ ಶಿವಾನಂದ ಉಳ್ಳಾಗಡ್ಡಿ ಅವಿಶ್ವಾಸ ಪ್ರಕ್ರಿಯೆ ನಡೆಸಿಕೊಟ್ಟರು.