ಬೆಂಗಳೂರು: ಮತದಾರರ ದತ್ತಾಂಶ ಕಳವು ಆರೋಪ ಹೊತ್ತಿರುವ ‘ಚಿಲುಮೆ’ ಸಂಸ್ಥೆಯ ಅಕ್ರಮಕ್ಕೆ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ (ಬಿಬಿಎಂಪಿ) ಕೆಲವು ವಲಯ ಅಧಿಕಾರಿಗಳೇ ಬೆಂಬಲವಾಗಿದ್ದರು ಎನ್ನುವ ಅಂಶ ಪೊಲೀಸ್ ತನಿಖೆಯಿಂದ ಹೊರಬಿದ್ದಿದೆ.
‘ಚಿಲುಮೆ’ ಸಮೀಕ್ಷಾ ತಂಡವು ಬೆಂಗಳೂರಿನ ಬಹುತೇಕ ವಿಧಾನ ಸಭಾ ಕ್ಷೇತ್ರಗಳ ಸಮೀಕ್ಷೆ ನಡೆಸಿದ್ದು, ಅದಕ್ಕೆ ಬಿಬಿಎಂಪಿಯ ವಲಯದ ಕಂದಾಯ ಅಧಿಕಾರಿಗಳು (ಆರ್‌ಒ) ಹಾಗೂ ಸಿಬ್ಬಂದಿ ನೆರವು ನೀಡಿ ದ್ದರು. ವಾರ್ಡ್‌ವಾರು ಮತದಾರರ ಪಟ್ಟಿಯನ್ನು ಈ ಸಂಸ್ಥೆಗೆ ಅಧಿಕಾರಿಗಳೇ ಒದಗಿಸುತ್ತಿದ್ದರು. ಅದನ್ನು ಆಧರಿಸಿ ಈ ತಂಡವು ಮನೆಮನೆಗೆ ತೆರಳಿ ಮಾಹಿತಿ ಕಲೆಹಾಕುತ್ತಿತ್ತು.
‘ಸಂಸ್ಥೆ ಷರತ್ತು ಉಲ್ಲಂಘಿಸಿದೆ’ ಎಂಬ ಆಪಾದನೆ ಮೇರೆಗೆ ಇದೇ ನ.2ರಂದು ಬಿಬಿಎಂಪಿ ಅನುಮತಿ ರದ್ದು ಪಡಿಸಿತ್ತು. ಅದಕ್ಕೂ ಮೊದಲೇ ಷರತ್ತು ಉಲ್ಲಂಘಿ ಸಿರುವುದು ಅಧಿಕಾರಿಗಳ ಗಮನಕ್ಕೆ ಬಂದಿದ್ದರೂ ಸಂಸ್ಥೆಯ ವಿರುದ್ಧ ದೂರು ನೀಡಿರಲಿಲ್ಲ. ವಿಷಯ ಬಹಿರಂಗಗೊಂಡ ಮೇಲಷ್ಟೇ ಬಿಬಿಎಂಪಿಯ ಅಧಿಕಾರಿಗಳು ಸಂಸ್ಥೆಯ ವಿರುದ್ಧ ದೂರು ನೀಡಿದ್ದಾರೆ. ದುರ್ಬಳಕೆ ನಡೆದಿರುವುದು ಗೊತ್ತಾಗಿ 16 ದಿನಗಳ ಬಳಿಕ ಹಲಸೂರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿ ಸಲಾಗಿತ್ತು.
ದೂರು ನೀಡದಂತೆ ಪ್ರಭಾವಿ ವ್ಯಕ್ತಿಯೊಬ್ಬರು ಸೂಚಿಸಿದ್ದರು ಎಂದು ಮೂಲಗಳು ತಿಳಿಸಿವೆ. ಬಂಧಿತ ಆರೋಪಿಗಳಾದ ರೇಣುಕಾ ಪ್ರಸಾದ್ ಹಾಗೂ ಧರ್ಮೇಶ್ ಅವರು ಬಿಬಿಎಂಪಿ ಅಧಿಕಾರಿಗಳ ಪಾತ್ರದ ಬಗ್ಗೆ ಬಾಯ್ಬಿಟ್ಟಿದ್ದಾರೆ. ಕಂದಾಯ ಅಧಿಕಾರಿ ಚಂದ್ರಶೇಖರ್ ಹಾಗೂ ಸಿಬ್ಬಂದಿಯನ್ನು ಪೊಲೀಸರು ವಿಚಾರಣೆ ನಡೆಸಿದ್ದಾರೆ.
‘ಉಳಿದ ವಲಯಗಳ ಆರ್‌ಒ ಗಳಿಗೆ ನೋಟಿಸ್ ಜಾರಿ ಮಾಡಿ ವಿಚಾರಣೆ ನಡೆಸಲು ಪೊಲೀಸರು ಮುಂದಾಗಿ ದ್ದಾರೆ’ ಎಂದು ಮೂಲಗಳು ತಿಳಿಸಿವೆ.
‘ಆಯಪ್ ರೂಪಿಸಿದ್ದ ವ್ಯಕ್ತಿ ವಶ’: ‘ಚಿಲುಮೆ’ ಸಂಸ್ಥೆಗೆ ‘ಸಮೀಕ್ಷಾ ಆಯಪ್’ ಅಭಿವೃದ್ಧಿ ಪಡಿಸಿದ್ದ ಸಂಜೀವ್ ಶೆಟ್ಟಿ ಎಂಬಾತನನ್ನು ಪೊಲೀಸರು ಭಾನುವಾರ ವಶಕ್ಕೆ ಪಡೆದು ವಿಚಾರಣೆ ನಡೆಸಿದರು. ಈ ಆಯಪ್‌ಗೆ ಚಿಲುಮೆಯ ಸಮೀಕ್ಷಾ ಸಿಬ್ಬಂದಿ ಮನೆಮನೆಗೆ ತೆರಳಿ ಮತದಾರರ ಗುರುತಿನ ಚೀಟಿ ಹಾಗೂ ಆಧಾರ್ ಸಂಖ್ಯೆ ಜೋಡಿಸುತ್ತಿದ್ದರು. ‘ಆಯಪ್ ರೂಪಿಸಿಕೊಟ್ಟ ಉದ್ದೇಶ, ಅದಕ್ಕೆ ಪಡೆದ ಹಣ, ಸಮೀಕ್ಷಾ ಆಯಪ್ ರೂಪಿಸಲು ಕೋರಿದ್ದವರು ಯಾರು?’ ಎಂಬ ಮಾಹಿತಿಯನ್ನು ಸಂಜೀವ್ ಅವರಿಂದ ತನಿಖಾ ತಂಡ ಪಡೆದುಕೊಂಡಿದೆ.
ಕೆಂಪೇಗೌಡ ಬಂಧನದ ಬಳಿಕ ವಶಕ್ಕೆ ಪಡೆದಿದ್ದ ಅವರ ಪೋಷಕರು ಹಾಗೂ ಪತ್ನಿಯನ್ನು ಮನೆಗೆ ಕಳುಹಿಸಿದ್ದು, ಮತ್ತೆ ವಿಚಾರಣೆಗೆ ಕರೆದರೆ ಬರುವಂತೆ ಸೂಚಿಸಲಾಗಿದೆ. ಇದುವರೆಗೆ 15 ಮಂದಿಯ ವಿಚಾರಣೆ ನಡೆಸಲಾಗಿದೆ ಎಂದು ಮೂಲಗಳು ತಿಳಿಸಿವೆ.