ಪಣಜಿ : ಪ್ರವಾಸೋದ್ಯಮಕ್ಕೆ ಹೆಸರಾದ ಗೋವಾದ ರಾಜಧಾನಿ ಪಣಜಿಯಲ್ಲಿ 53 ನೇ ಭಾರತೀಯ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ (ಐಊಊಐ) ದ ಕ್ಷಣಗಣನೆ ಆರಂಭವಾಗಿದೆ.
ಹಿಂದಿನ ಕೆಲವು ವರ್ಷಗಳಿಗಿಂತ ಈ ವರ್ಷ ಕೊಂಚ ವಿಭಿನ್ನವಾಗಿ ಸಿದ್ಧಗೊಳ್ಳುತ್ತಿರುವ ಎಂಟರ್‌ಟೈನ್ ಮೆಂಟ್ ಸೊಸೈಟಿ ಆಫ್ ಗೋವಾದ ಆವರಣ ಹಾಗೂ ಪಣಜಿಯ ಮುಖ್ಯ ರಸ್ತೆಗಳು ವಿದ್ಯುತ್ ದೀಪಾಲಂಕಾರದಿಂದ ಕಂಗೊಳಿಸುತ್ತಿವೆ.
ಕೃತಕ ನಿರ್ಮಿತ ವರ್ಣರಂಜಿತ ನವಿಲುಗಳ ಸಂಭ್ರಮ ಉತ್ಸವಕ್ಕೆ ಹೊಸ ಹುಮ್ಮಸ್ಸು ತುಂಬತೊಡಗಿವೆ. ನ್ಯಾಷನಲ್ ಫಿಲ್ಮ್ ಡೆವಲಪ್‌ಮೆಂಟ್ ಕಾರ್ಪೋರೇಷನ್ (ಎನ್‌ಎಫ್ಡಿಸಿ) ಉತ್ಸವದ ನೇತೃತ್ವ ವಹಿಸಿದೆ. ವಿವಿಧ ಇಲಾಖೆಗಳೂ ಎನ್‌ಎಫ್ಡಿಸಿ ಜತೆಗೆ ಕೈ ಜೋಡಿಸಿವೆ. ಹಲವು ರಾಜ್ಯ ಹಾಗೂ ದೇಶಗಳಿಂದ ಈಗಾಗಲೇ ಸಿನಿ ಆಸಕ್ತರು ಆಗಮಿಸತೊಡಗಿದ್ದಾರೆ.
ಈ ದಿನ (ರವಿವಾರ-ನ.20) ಸಂಜೆ ಪಣಜಿಯ ಡಾ. ಶ್ಯಾಮ ಪ್ರಸಾದ ಮುಖರ್ಜಿ ಒಳಾಂಗಣ ಸಭಾಂಗಣದಲ್ಲಿ ಸಂಜೆ 4 ಕ್ಕೆ ಚಿತ್ರೋತ್ಸವದ ಉದ್ಘಾಟನೆ ನಡೆಯಲಿದೆ. ಉದ್ಘಾಟನಾ ಸಮಾರಂಭದಲ್ಲಿ ರಾಜ್ಯಪಾಲರಾದ ಪಿ.ಎಸ್. ಶ್ರೀಧರನ್, ಕೇಂದ್ರ ಸಚಿವರಾದ ಅನುರಾಗ್ ಠಾಕೂರ್, ಮುರುಗನ್, ಗೋವಾದ ಮುಖ್ಯಮಂತ್ರಿ ಪ್ರಮೋದ್ ಸಾವಂತ್ ಮತ್ತಿತರರು ಪಾಲ್ಗೊಳ್ಳುವರು. ಬಾಲಿವುಡ್ ನಟರಾದ ಅಜಯ್ ದೇವಗನ್ ಹಾಗೂ ಸುನಿಲ್ ಶೆಟ್ಟಿ ಪಾಲ್ಗೊಳ್ಳುವ ಸಾಧ್ಯತೆ ಇದೆ. ಅಲ್ಲದೇ ಕಲಾವಿದರಾದ ಮೃಣಾಲ್ ಠಾಕೂರ್, ವರುಣ್ ಧವನ್. ಕೆಥರೇನ್ ಥೆರೇಸಾ, ಸಾರಾ ಆಲಿಖಾನ್, ಕಾರ್ತಿಕ್ ಆರ್ಯನ್ ಹಾಗೂ ಅಮೃತಾ ಖನ್ವಿಲ್ಕರ್ ಪಾಲ್ಗೊಳ್ಳುವರು.