ಗದಗ: ಬಾಗಲಕೋಟೆ ಜಿಲ್ಲೆಯ ರೋಗಿ ನಂಬರ್ 607ರ 25 ವರ್ಷದ ಗರ್ಭಿಣಿಗೆ ಕೊರೊನಾ ಪಾಸಿಟಿವ್ ಪ್ರಕರಣದ ನಂಟು ಈಗ ಗದಗ ಜಿಲ್ಲೆಗೂ ಹಬ್ಬಿದೆ.
ಜಿಲ್ಲೆಯ ರೋಣ ತಾಲೂಕಿನ ಕೃಷ್ಣಾಪುರ ಗ್ರಾಮ ಸೋಂಕಿತ ಮಹಿಳೆ ತವರೂರು. ಸೋಂಕಿತ ಮಹಿಳೆ ಏಪ್ರಿಲ್ 29 ರಂದು ಕೃಷ್ಣಾಪುರ ತವರೂರಿಗೆ ಬಂದಿದ್ದರು. ಅಷ್ಟೇ ಅಲ್ಲದೇ ಈ ಸೋಂಕಿತ ಮಹಿಳೆ ರೋಣ ಪಟ್ಟಣದ 2 ಖಾಸಗಿ ಆಸ್ಪತ್ರೆಗಳಿಗೆ ಭೇಟಿ ನೀಡಿ ಚಿಕಿತ್ಸೆ ಪಡೆದಿದ್ದಾರೆ.
ಗರ್ಭಿಣಿಗೆ ಪಾಸಿಟಿವ್ ದೃಢಪಟ್ಟ ನಂತರ ಜಿಲ್ಲಾಡಳಿತ ಹಾಗೂ ಆರೋಗ್ಯ ಇಲಾಖೆ ಆದೇಶ ಮೇರೆಗೆ ಚಿಕಿತ್ಸೆ ನೀಡಿದ 2 ಆಸ್ಪತ್ರೆಗಳು ಸೀಜ್ ಮಾಡಲಾಗಿದೆ. ಎರಡು ಖಾಸಗಿ ಆಸ್ಪತ್ರೆ ವೈದ್ಯರು ಹಾಗೂ ಓರ್ವ ಲ್ಯಾಬ್ ಟೆಕ್ನಿಷಿಯನ್ ಸೇರಿ ಮೂರು ಜನರನ್ನ ಕ್ವಾರಂಟೈನ್ ಮಾಡಲಾಗಿದೆ.
ಈಗಾಗಲೇ ರೋಗಿ 607ರ ಪ್ರಾಥಮಿಕ ಸಂಪರ್ಕದ 20 ಜನರು ಹಾಗೂ ದ್ವೀತಿಯ ಸಂಪರ್ಕ ಹೊಂದಿದ 40 ಜನರ ಥ್ರೋಟ್ ಸ್ವ್ಯಾಬ್ ತಪಾಸಣೆಗೆ ಕಳುಹಿಸಲಾಗಿದೆ. ಕೃಷ್ಣಾಪುರ ಗ್ರಾಮವನ್ನು ಕಂಟೈನ್ಮೆಂಟ್ ಝೋನ್ ಮಾಡಲಾಗಿದೆ ಎಂದು ಜಿಲ್ಲಾಧಿಕಾರಿ ಎಂ.ಜಿ ಹಿರೇಮಠ ಮಾಹಿತಿ ನೀಡಿದ್ದಾರೆ.