ಹಾವೇರಿ: ಮುಂಬೈನಿಂದ ಬಂದಿದ್ದ ಮೂವರಲ್ಲಿ ಓರ್ವನಿಗೆ ಕೊರೊನಾ ಸೋಂಕು ಇರುವುದು ಪತ್ತೆಯಾಗಿದ್ದರಿಂದ ಸೋಂಕಿತ ವಾಸವಾಗಿದ್ದ ಹಾವೇರಿ ಜಿಲ್ಲೆಯ ಸವಣೂರು ಪಟ್ಟಣದ ಎಸ್.ಎಂ ಕೃಷ್ಣ ನಗರವನ್ನ ಜಿಲ್ಲಾಡಳಿತ ಸೀಲ್ ಡೌನ್ ಮಾಡಿದೆ.
ಏಪ್ರಿಲ್ 28 ರಂದು ಗೂಡ್ಸ್ ಲಾರಿಯಲ್ಲಿ ಮೂವರು ಮುಂಬೈನಿಂದ ಸವಣೂರು ಪಟ್ಟಣಕ್ಕೆ ಬಂದಿದ್ದರು. ಅವರನ್ನ ತಪಾಸಣೆಗೆ ಒಳಪಡಿಸಿ ಸ್ಯಾಂಪಲ್ಸ್ ಕಲೆಕ್ಟ್ ಮಾಡಿ ಲ್ಯಾಬ್ ಕಳಿಸಿದ ನಂತರ ಮೂವರಲ್ಲಿ 32 ವರ್ಷದ ಓರ್ವನಿಗೆ ಕೊರೊನಾ ಸೋಂಕು ಇರೋದು ಸೋಮವಾರ ದೃಢಪಟ್ಟಿತ್ತು. ಇನ್ನಿಬ್ಬರ ವರದಿ ಇಂದು ಜಿಲ್ಲಾಡಳಿತದ ಕೈಸೇರುವ ಸಾಧ್ಯತೆ ಇದೆ.
ಓರ್ವನಲ್ಲಿ ಕೊರೊನಾ ಸೋಂಕು ಇರೋದು ದೃಢಪಡ್ತಿದ್ದಂತೆ ಸೋಂಕಿತ ವಾಸವಾಗಿದ್ದ ಪ್ರದೇಶವನ್ನ ಜಿಲ್ಲಾಡಳಿತ ಬ್ಯಾರಿಕೇಡ್ ಹಾಕಿ ಸಂಪೂರ್ಣ ಸೀಲ್ ಡೌನ್ ಮಾಡಿದೆ. ಆ ಪ್ರದೇಶದಿಂದ ಐದು ಕಿ.ಮೀ ವ್ಯಾಪ್ತಿಯ ಪ್ರದೇಶವನ್ನ ಬಫರ್ ಝೋನ್ ಪ್ರದೇಶವೆಂದು ಘೋಷಿಸಿದೆ. ಸೀಲ್ ಡೌನ್ ಆಗಿರೋ ಪ್ರದೇಶದಿಂದ ಯಾರೂ ಹೊರ ಹೋಗದಂತೆ ಮತ್ತು ಆ ಪ್ರದೇಶದಲ್ಲಿ ಯಾರೂ ಒಳಗೆ ಹೋಗದಂತೆ ಜಿಲ್ಲಾಡಳಿತ ಬ್ಯಾರಿಕೇಡ್ ಹಾಕಿ ಬಿಗಿ ಪೊಲೀಸ್ ಬಂದೋಬಸ್ತ್ ಕ್ರಮ ಕೈಗೊಂಡಿದೆ.
ಬಸ್ ಸಂಚಾರ ಆರಂಭ:
ಆರೆಂಜ್ ಝೋನ್ ನಲ್ಲಿರೋ ಹಾವೇರಿ ಜಿಲ್ಲೆಯಲ್ಲಿ ಸಾರಿಗೆ ಬಸ್ ಸಂಚಾರ ಆರಂಭವಾಗಿದೆ. ನಿನ್ನೆಯಿಂದಲೇ ಬಸ್ಸುಗಳು ಜಿಲ್ಲೆಯ ಒಳಗಡೆ ಪ್ರಯಾಣಿಸ್ತಿವೆ. ಇಂದು ಕೂಡ ಬೆಂಗಳೂರು, ದಕ್ಷಿಣ ಕನ್ನಡ ಸೇರಿದಂತೆ ಬೇರೆ ಬೇರೆ ಊರುಗಳಿಂದ ಬಂದಿರೋ ಪ್ರಯಾಣಿಕರನ್ನ ಬಸ್ ಗಳು ಕರೆದುಕೊಂಡು ಹೋಗ್ತಿವೆ. ಬಸ್ಸಿನಲ್ಲಿ ಮಾಸ್ಕ್ ಧರಿಸಿಕೊಂಡು, ಸಾಮಾಜಿಕ ಅಂತರ ಕಾಯ್ದುಕೊಂಡು ಪ್ರಯಾಣ ಮಾಡುವಂತೆ ಸಾರಿಗೆ ಇಲಾಖೆ ಸಿಬ್ಬಂದಿ ನೋಡಿಕೊಳ್ತಿದ್ದಾರೆ.
ಜಿಲ್ಲೆಯ ಒಳಗಡೆ ಬಸ್ ಸಂಚಾರ ಆರಂಭ ಆಗಿರೋದ್ರಿಂದ ಜನರು ನಿತ್ಯದ ಕೆಲಸ ಕಾರ್ಯಗಳಿಗೆ ಬಸ್ಸಿನಲ್ಲಿ ಪ್ರಯಾಣ ಮಾಡ್ತಿದ್ದಾರೆ. ಪ್ರಯಾಣಿಕರ ಸಂಖ್ಯೆ ನೋಡಿಕೊಂಡು ಬಸ್ಸುಗಳು ಒಂದೊಂದಾಗಿ ಬಸ್ ನಿಲ್ದಾಣಕ್ಕೆ ಆಗಮಿಸಿ ಪ್ರಯಾಣಿಕರನ್ನ ಕರೆದುಕೊಂಡು ಹೋಗ್ತಿವೆ.