ಆಸ್ಟ್ರೇಲಿಯಾ ದೇಶದ ಸಿಡ್ನಿಯಲ್ಲಿ ವಾಸವಾಗಿರುವ ಕನ್ನಡ ಸಂಘದ ನಿಕಟಪೂರ್ವ ಅಧ್ಯಕ್ಷರಾದ ವಿಜಯ ಕುಮಾರ ಹಲಗಲಿ ಅವರು ಹಾಗೂ ಅವರ ಧರ್ಮ ಪತ್ನಿ ಗಿರೀಜಾ ದೇವಿ ಹಲಗಲಿ ಅವರು, ಪುತ್ರಿ ನೇತ್ರಾವತಿ, ಪುತ್ರ ನಿರಂಜನ ಭಾನುವಾರ ನಗರದ ಹುಕ್ಕೇರಿ ಹಿರೇಮಠದ ಶಾಖಾಮಠಕ್ಕೆ ಭೇಟಿ ನೀಡಿ ಶ್ರೀ ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿಯಿಂದ ಆಶೀರ್ವಾದ ಪಡೆದರು.
ಈ ಸಂದರ್ಭದಲ್ಲಿ ಮಾತನಾಡಿದ ವಿಜಯಕುಮಾರ ಹಲಗಲಿ ಅವರು, ಹುಕ್ಕೇರಿಯ ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ ಅವರು ಕರ್ನಾಟಕದಲ್ಲಿ ಮಾತ್ರ ಕನ್ನಡವನ್ನು ಬೆಳೆಸುತ್ತಿಲ್ಲ. ಗೋವಾ, ಮಹಾರಾಷ್ಟ್ರ ಸೇರಿದಂತೆ ಅನೇಕ ಭಾಗಗಳಲ್ಲಿ ಕನ್ನಡವನ್ನು ಕಟ್ಟಿದ ಶ್ರೀಗಳು ನಮ್ಮ ಆಸ್ಟ್ರೇಲಿಯಾ ದೇಶದ ಸಿಡ್ನಿ ರಾಜ್ಯದಲ್ಲಿ, ಮೆಲ್ಬರ್ನ್ ನಲ್ಲಿ ಕನ್ನಡದ ಕಾರ್ಯಕ್ರಮದಲ್ಲಿ ಭಾಗಿಯಾಗಿ ಕನ್ನಡದ ಪ್ರೇಮವನ್ನು ಬಿತ್ತಿದ್ದಾರೆ. ಇಂದು ದೇಶದಲ್ಲಿ ಯಾರೂ ಮಾಡದ ಕಾರ್ಯವನ್ನು ಶ್ರೀಗಳು ಮಾಡಿದ್ದಾರೆ ಎಂದರು.
ಸತತ ಮೂರು ವರ್ಷಗಳಿಂದ ಕನ್ನಡ ರಾಜ್ಯೋತ್ಸವದಲ್ಲಿ ಹೋಳಿಗೆ ಊಟ ಮಾಡಿಸಿದ ಮೊದಲಿಗರು ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ. ನಾಲ್ಕು ಜನ ಹೋಳಿಗೆ ಊಟ ಮಾಡುವುದು ಕಷ್ಟದ ದಿನದಲ್ಲಿ ಈ ವರ್ಷ 80 ಸಾವಿರ ಕನ್ನಡಿಗರಿಗೆ ಹೋಳಿಗೆ ಊಟ ನೀಡಿ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿರುವುದು ಅಭಿನಂದನೀಯ ಎಂದರು.
ಇದೇ ಸಂದರ್ಭದಲ್ಲಿ ಬೆಳಗಾವಿ ಹುಕ್ಕೇರಿ ಹಿರೇಮಠದ ಶ್ರೀ ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ ಮಾತನಾಡಿ, ವಿಜಯಕುಮಾರ ಹಲಗಲಿ ಅವರ ಕುಟುಂಬ ಕನ್ನಡದ ಕುಟುಂಬ. ಹೊರ ದೇಶದಲ್ಲಿ ಇದ್ದರೂ ಕೂಡ ಇನ್ನೂ ಮನೆಯಲ್ಲಿ ಕನ್ನಡ ಮಾತನಾಡುತ್ತಾರೆ. ಆಸ್ಟ್ರೇಲಿಯಾ ದೇಶದ ನೂರಾರು ಜನರಿಗೆ ಕನ್ನಡ ಕಲಿಸಿರುವ ಕೀರ್ತಿ ಇವರಿಗೆ ಸಲ್ಲುತ್ತದೆ ಎಂದರು. ನವೆಂಬರ್ ತಿಂಗಳಲ್ಲಿ ಶ್ರೀಮಠದ ಆಶೀರ್ವಾದ ಪಡೆದಿರುವುದು ಸಂತಸ ತಂದಿದೆ. ಹೊರ ದೇಶದಲ್ಲಿರುವ ಕನ್ನಡಿಗರಿಗೆ ಕರ್ನಾಟಕ ಸರಕಾರ ಹೆಚ್ಚು ಸಹಕರಿಸಲಿ ಎಂದರು.
ಕರವೇ ಜಿಲ್ಲಾಧ್ಯಕ್ಷ ದೀಪಕ ಗುಡಗನಟ್ಟಿ ಮಾತನಾಡಿ, ಕನ್ನಡಿಗರಿಗೆ ಸ್ಪೂರ್ತಿಯ ಚೇತನ ಹುಕ್ಕೇರಿ ಹಿರೇಮಠ. ಈ ಮಠದಲ್ಲಿ ಇಂದು ಶ್ರೀಗಳು ಆಸ್ಟ್ರೇಲಿಯಾ ದೇಶದ ಕನ್ನಡಿಗರನ್ನು ಗೌರವಿಸುವುದರ ಮೂಲಕ ಬೆಳಗಾವಿ ಜಿಲ್ಲೆಗೆ ಕೀರ್ತಿ ತಂದಿದ್ದಾರೆ ಎಂದರು.