ಬೆಳಗಾವಿ: ನಗರ ಹೊರವಲಯದ ಅಲಾರವಾಡ ಕ್ರಾಸ್ ಬಳಿ ರಾಷ್ಟ್ರೀಯ ಹೆದ್ದಾರಿ ಮೇಲೆ ಸೋಮವಾರ ತಡರಾತ್ರಿ ಟ್ರ್ಯಾಕ್ಟರ್ ಹಾಗೂ ಲಾರಿ ಮಧ್ಯೆ ಡಿಕ್ಕಿ ಸಂಭವಿಸಿ, ಐವರು ಗಾಯಗೊಂಡಿದ್ದಾರೆ.
ಟ್ರ್ಯಾಕ್ಟರ್ ಟ್ರಾಲಿ ತುಂಡಾಗಿ ಬೋರಲು ಬಿದ್ದಿದ್ದು, ಅದರಲ್ಲಿದ್ದವರು ಪವಾಡ ಸದೃಶ್ಯ ರೀತಿಯಲ್ಲಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಎರಡು ಟ್ರಾಲಿಗಳನ್ನು ಹೊಂದಿದ ಟ್ರ್ಯಾಕ್ಟರಿನಲ್ಲಿ ಕಬ್ಬು ಕಟಾವು ಮಾಡುವವರು ಕೆಲಸ ಮುಗಿಸಿ ಪ್ರಯಾಣಿಸುತ್ತಿದ್ದರು. ಹುಬ್ಬಳ್ಳಿ ಕಡೆಯಿಂದ ಬೆಳಗಾವಿ ಮಾರ್ಗವಾಗಿ ಬಂದ ಲಾರಿ ಟ್ರ್ಯಾಕ್ಟರಿನ ಎರಡನೇ ಟ್ರಾಲಿಗೆ ಡಿಕ್ಕಿ ಹೊಡೆಯಿತು. ಅಪಘಾತದ ರಭಸಕ್ಕೆ ಲಾರಿಯ ಮುಂಭಾಗ ನಜ್ಜುಗುಜ್ಜಾಗಿದೆ.
ಗಾಯಗೊಂಡವರನ್ನು ಜಿಲ್ಲಾ ಆಸ್ಪತ್ರೆಗೆ ಸಾಗಿಸಲಾಯಿತು. ಸ್ಥಳಕ್ಕೆ ಬಂದ ಪೊಲೀಸರು ಗ್ರಾಮಸ್ಥರ ನೆರವಿನಿಂದ ಟ್ರಾಲಿಯನ್ನು ರಸ್ತೆ ಬದಿಗೆ ಸರಿಸಿ ಸಂಚಾರಕ್ಕೆ ಅನುವು ಮಾಡಿದರು.