ಚಿತ್ರದುರ್ಗ: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ತಾಕತ್ತಿದ್ದರೆ ನಮ್ಮ ಅವಧಿ ಹಾಗೂ ಅವರ ಆಡಳಿತಾವಧಿಯ ಸರ್ಕಾರದ ಭ್ರಷ್ಟಾಚಾರವನ್ನು ತನಿಖೆ ಮಾಡಿಸಲಿ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಸವಾಲು ಹಾಕಿದರು.
ಹೊಸದುರ್ಗದಲ್ಲಿ ಮಾಜಿ ಶಾಸಕ ಬಿ.ಜಿ.ಗೋವಿಂದಪ್ಪ ಅವರ ಜನ್ಮ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ರಾಹುಲ್ ಗಾಂಧಿ ಅವರಿಗೆ ಸಿದ್ದರಾಮಯ್ಯ ಸರ್ಕಾರದ ಭ್ರಷ್ಟಾಚಾರದ ದಾಖಲೆ ಕಳುಹಿಸುವ ಹೇಳಿಕೆಗೆ ಪ್ರತಿಕ್ರಿಯಿಸಿ, ಬಸವರಾಜ ಬೊಮ್ಮಾಯಿಗೆ ಧೈರ್ಯ ಇಲ್ಲ.
ನಮ್ಮ ಆಡಳಿತಾವಧಿಯಲ್ಲಿ ದೂರು ಬಂದಾಗ 8 ಪ್ರಕರಣಗಳನ್ನು ಸಿಬಿಐಗೆ ವಹಿಸಿದ್ದೇನೆ. ಎಲ್ಲಾ ಪ್ರಕರಣಗಳು ಬಿ.ರಿಪೋರ್ಟ್ ಆಗಿವೆ. ನಮ್ಮ ಕಾಲದಲ್ಲಿ ಒಂದೇ ಒಂದು ಹಗರಣ ಇರಲಿಲ್ಲ ಎಂದರು.
ಬಿಜೆಪಿ ನಡೆಸುತ್ತಿರುವ ಜನಸಂಕಲ್ಪ ಯಾತ್ರೆ ಕುರಿತು ವ್ಯಂಗ್ಯವಾಡಿದ ಸಿದ್ದರಾಮಯ್ಯ, ಮನೆ ಕೊಟ್ಟಿಲ್ಲ, ಗುಂಡಿ ಮುಚ್ಚಿಲ್ಲ, ನೀರಾವರಿ ಯೋಜನೆ ಕೊಟ್ಟಿಲ್ಲ, ಬೆಳೆಹಾನಿ, ಜಮೀನು ಮುಳುಗಡೆಗೆ ಪರಿಹಾರ ಕೊಟ್ಟಿಲ್ಲ ಅಂತಾ ಸಂಕಲ್ಪ ಮಾಡುತ್ತೀರಾ ಎಂದು ಛೇಡಿಸಿದರು.
ಬಿಜೆಪಿ ಸರ್ಕಾರ ಲೂಟಿ ಹೊಡೆಯುತ್ತಿದೆ. 40 ಪರ್ಸೆಂಟ್ ಕಮಿಷನ್‌ನಲ್ಲಿ ಸರ್ಕಾರ ಮುಳುಗಿದೆ. ಗುತ್ತಿಗೆದಾರರ ಸಂಘದ ಅಧ್ಯಕ್ಷ ಕೆಂಪಯ್ಯ ಪ್ರಧಾನಿ ನರೇಂದ್ರ ಮೋದಿಗೆ ಪತ್ರ ಬರೆದು ವರ್ಷ ಕಳೆದರೂ ಮೋದಿ ಯಾವ ಕ್ರಮವನ್ನೂ ಕೈಗೊಂಡಿಲ್ಲ. ಆದರೆ, ನಾನು ತಿನ್ನಲ್ಲ, ತಿನ್ನಲು ಬಿಡುವುದಿಲ್ಲ ಎನ್ನುತ್ತಾರೆ ಎಂದರು.