ಬೆಂಗಳೂರು: ಡಿಕೆ ಶಿವಕುಮಾರ್ ಹಾಗೂ ಸಿದ್ದರಾಮಯ್ಯ ಅಂದರೆ 36 ಇದ್ದಂತೆ. ಎರಡೂ ಮುಖ ಎಂದಿಗೂ ಸೇರುವುದಿಲ್ಲ. ಎಣ್ಣೆ ಮತ್ತು ಸೀಗೇ ಕಾಯಿ ಒಂದಾಗಲು ಸಾಧ್ಯವೇ? ಎಂದೂ ಸಾಧ್ಯವಿಲ್ಲ. ಅವರಿಬ್ಬರೂ ಒಂದಾಗಲು ಕೆಲವರು ಪ್ರಯತ್ನ ಮಾಡುತ್ತಿದ್ದಾರೆ. ಆದರೆ, ಅವರಿಬ್ಬರೂ ಒಂದಾಗಲು ಪ್ರಯತ್ನ ಮಾಡುತ್ತಿಲ್ಲ ಎಂದು ಸಚಿವ ಗೋವಿಂದ ಕಾರಜೋಳ ಟೀಕಿಸಿದರು.
ವಿಧಾನಸೌಧದಲ್ಲಿ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು, ಭಾರತ್ ಜೋಡೋದಲ್ಲಿ ಸಿದ್ದರಾಮಯ್ಯ ಹಾಗೂ ಡಿಕೆಶಿ ಒಟ್ಟಾಗಿ ಹೋಗುತ್ತಿರುವ ಬಗ್ಗೆ ಪ್ರತಿಕ್ರಿಯಿಸಿ, ಅವರಿಬ್ಬರ ದಾರಿ ಬೇರೆ ಬೇರೆ, ಸಿದ್ದರಾಮಯ್ಯ ಅವರದ್ದು ಒಂದು ದಾರಿ, ಡಿಕೆಶಿಯ ಅವರದ್ದು ಒಂದು ದಾರಿ ಇದೆ. ನಮ್ಮ ಉತ್ತರ ಕರ್ನಾಟಕದ ಕಡೆ ಒಂದು ಮಾತಿದೆ.
ಅವರಿಬ್ಬರೂ 36 ಎಂದು. 36 ಎಂದೂ ಒಂದಾಗಲ್ಲ, ಮೂರು ಒಂದು ಕಡೆ ಇದ್ದರೆ, ಆರು ಒಂದು ಕಡೆ ಇರುತ್ತದೆ. ಮುಖ ಕೂಡುವುದಿಲ್ಲ. ಡಿಕೆಶಿ ಮತ್ತು ಸಿದ್ದರಾಮಯ್ಯ ಮೂವತ್ತಾರು. ಇಬ್ಬರ ಸಿದ್ದಾಂತವೂ ಬೇರೆ ಬೇರೆ. ಇಬ್ಬರು ಸಿಎಂ ಅಭ್ಯರ್ಥಿಗಳು ಒಂದೇ ಕುರ್ಚಿಯಲ್ಲಿ ಕೂರಲು ಸಾಧ್ಯವಿಲ್ಲ. ಹಗಲು ಕನಸು ಕಾಣುತ್ತಿದ್ದಾರೆ ಎಂದು ಕಿಚಾಯಿಸಿದರು.