ಬೆಳಗಾವಿಯಲ್ಲಿ 95ನೇ ನಾಡಹಬ್ಬ ಉತ್ಸವಕ್ಕೆ ವಿದ್ಯುಕ್ತವಾಗಿ ಚಾಲನೆ ಸಿಕ್ಕಿದ್ದು. ಇಂದಿನಿಂದ ಐದು ದಿನಗಳ ಕಾಲ ವಿವಿಧ ಸಾಹಿತ್ಯಿಕ ಮತ್ತು ಸಾಂಸ್ಕøತಿಕ ಕಾರ್ಯಕ್ರಮಗಳು ನಡೆಯಲಿವೆ.
ಬೆಳಗಾವಿಯ ಕನ್ನಡ ಸಾಹಿತ್ಯ ಭವನದ ಆವರಣದಲ್ಲಿ ಎಂ.ಎಸ್.ಮುಗಳಿ ವೇದಿಕೆಯಲ್ಲಿ ಹಮ್ಮಿಕೊಂಡಿರುವ 95ನೇ ನಾಡಹಬ್ಬ ಉತ್ಸವ ಕಾರ್ಯಕ್ರಮದ ಮೊದಲ ದಿನದ ಕಾರ್ಯಕ್ರಮಕ್ಕೆ ನಾಗನೂರು ರುದ್ರಾಕ್ಷಿ ಮಠದ ಪರಮಪೂಜ್ಯ ಡಾ.ಅಲ್ಲಮಪ್ರಭು ಮಹಾಸ್ವಾಮಿಗಳು ದೀಪ ಪ್ರಜ್ವಲಿಸುವ ಮೂಲಕ ಚಾಲನೆ ನೀಡಿದರು.
ನಂತರ ಧಾರವಾಡದ ಖ್ಯಾತ ಸಾಹಿತಿ ಡಾ.ಬಾಳಣ್ಣ ಶೀಗಿಹಳ್ಳಿ ಅವರು ಬೆಳಗಾವಿ ಚಳುವಳಿಗಳು ಮತ್ತು ನಾಡಹಬ್ಬದ ಕುರಿತು ಕುಂದಾನಗರಿಯಲ್ಲಿ ಹಲವಾರು ವರ್ಷಗಳಿಂದ ಕುಂದಾನಗರಿಯಲ್ಲಿ ಈ ನಾಡಹಬ್ಬ ಆಚರಿಸಿಕೊಂಡು ಬರುತ್ತಿರುವ ಮಹನೀಯರನ್ನು ನಾವು ಸ್ಮರಿಸಿಕೊಳ್ಳದೇ ಹೋದರೆ ಅವರ ಘನವ್ಯಕ್ತಿತ್ವಕ್ಕೆ ದೊಡ್ಡ ಅಪಾರ ಮಾಡಿದಂತೆ ಆಗುತ್ತದೆ ಎಂದರು.
ಮುಂದುವರಿದು ಮಾತನಾಡಿದ ಅವರು ಮಾಲೆ ಹೆಣೆಯುವ ವ್ಯಕ್ತಿ ನಿತ್ಯ ಮಾಲೆಯನ್ನು ಕಟ್ಟುತ್ತಿರುತ್ತಾನೆ. ಮಾಲೆ ಕಟ್ಟುವ ಅವನ ಉತ್ಸಾಹಕ್ಕೆ ಎಂದೂ ಕುಂದು ಉಂಟಾಗಿಲ್ಲ.ಆದರೆ ಮುಡಿಯುವ ಭೋಗಿಗಳು ಇಲ್ಲದೇ ಆ ಮಾಲೆಯ ಸುಖವನ್ನು ಅನುಭವಿಸುವವರು ಇಲ್ಲದೇ ಹೋದರೆ ಆ ಮಾಲೆ ನಶಿಸಿ ಹೋಗುತ್ತದೆ, ಬಾಡಿ ಹೋಗುತ್ತದೆ ಎಂದು 10ನೇ ಶತಮಾನದಲ್ಲಿ ಶ್ರೇಷ್ಠ ಕವಿ ಜನ್ನ ತನ್ನ ಕಾವ್ಯದಲ್ಲಿ ತುಂಬಾ ವಿಷಾದ ವ್ಯಕ್ತಪಡಿಸಿದ್ದಾನೆ.
ಆದರೆ ಇದಕ್ಕೆ ತ್ರಿಕಾಲ ಭಾದಿತವಾದ ಮೌಲ್ಯವಿದೆ ಎಂದು ನನಗೆ ಅನಿಸುತ್ತದೆ. ಪುಸ್ತಕಗಳನ್ನು ಅನೇಕ ಲೇಖಕರು ಬರೆಯುತ್ತಾರೆ. ಆ ಪುಸ್ತಕಗಳನ್ನು ಓದುವ ವರ್ಗ, ಓದುವ ಸಹೃದಯಿ ಇಲ್ಲದೇ ಹೋದರೆ ಆ ಪುಸ್ತಕಕ್ಕೆ ಯಾವ ಬೆಲೆಯೂ ಬರುವುದಿಲ್ಲ ಎಂದರು.