Breaking News

17 ರಿಂದ ನಾಲ್ಕು ದಿನಗಳ ಕೃಷಿ ಹಬ್ಬ; 10 ಲಕ್ಷ ಜನ ಭಾಗಿಯಾಗುವ ನಿರೀಕ್ಷೆ

Spread the love

ಧಾರವಾಡ: ಕೊರೊನಾ ಮಹಾಮಾರಿಯಿಂದಾಗಿ ಕಳೆದೆರಡು ವರ್ಷಗಳಿಂದ ಕೈ ಬಿಟ್ಟಿದ್ದ ಪ್ರತಿಷ್ಠಿತ ಧಾರವಾಡ ಕೃಷಿ ವಿವಿ ನಡೆಸುವ ಧಾರವಾಡ ಕೃಷಿ ಮೇಳವನ್ನು ಸೆ.17ರಿಂದ ಸೆ.20ರವರೆಗೆ ನಡೆಸಲು ಕೃಷಿ ವಿಶ್ವವಿದ್ಯಾಲಯ ತೀರ್ಮಾನಿಸಿದೆ.

ನಾಲ್ಕು ದಿನಗಳವರೆಗೆ ನಡೆಯುವ ಈ ವರ್ಷದ ಕೃಷಿ ಮೇಳವನ್ನು “ರೈತರ ಆದಾಯ ದ್ವಿಗುಣಗೊಳಿಸಲು ಕೃಷಿ ತಾಂತ್ರಿಕತೆಗಳು’ ಎಂಬ ಶೀರ್ಷಿಕೆಯಡಿಯಲ್ಲಿ ಆಯೋಜಿಸಲಾಗಿದ್ದು, ಶನಿವಾರವೇ ಬೀಜ ಮೇಳದ ಮೂಲಕ ರೈತರ ಹಬ್ಬಕ್ಕೆ ಚಾಲನೆ ದೊರೆಯಲಿದೆ.

ಕಳೆದ 2-3 ವರ್ಷಗಳಿಂದ ನೆರೆ ಹಾವಳಿ, ಕೋವಿಡ್‌-19 ಹೊಡೆತದಿಂದ ಮುಂದೂಡುತ್ತ ರದ್ದಾಗಿದ್ದ ಕೃಷಿ ಮೇಳವು ಈ ಸಲ ರಂಗೇರಿದ್ದು, ಮೇಳಕ್ಕಾಗಿ ಈಗಾಗಲೇ ತಯಾರಿ ಅಂತಿಮ ರೂಪ ಪಡೆದಿದೆ. ವಿವಿ ಆವರಣದಲ್ಲಿ ಮಳಿಗೆಗಳ ನಿರ್ಮಾಣ ಕಾರ್ಯ ಮುಗಿದಿದ್ದು, ಮುಖ್ಯ ವೇದಿಕೆ ಸಿದ್ಧಪಡಿಸುವ ಕಾರ್ಯ ಸಾಗಿದೆ.

ನಾಲ್ಕು ದಿನಗಳ ಈ ಮೇಳದಲ್ಲಿ ಸುಮಾರು 10 ಲಕ್ಷ ರೈತರು ಭಾಗವಹಿಸುವ ನಿರೀಕ್ಷೆಯಿದ್ದು, ಕೃಷಿ ಹಾಗೂ ಕೃಷಿ ಪೂರಕ ತಂತ್ರಜ್ಞಾನಗಳೊಂದಿಗೆ ಬೀಜ ಮೇಳ-ಮತ್ಸ್ಯ ಮೇಳವೂ ಇರಲಿದೆ. ವಿಶ್ವವಿದ್ಯಾಲಯದ ವ್ಯಾಪ್ತಿಯಲ್ಲಿ ಬರುವ ಆವರಣಗಳಲ್ಲಿ ಕೈಗೊಂಡ ಬೋಧನೆ, ಸಂಶೋಧನೆ, ವಿಸ್ತರಣಾ ಚಟುವಟಿಕೆಗಳ ಸಮಗ್ರ ಮಾಹಿತಿ ಮೇಳದಲ್ಲಿ ಸಿಗಲಿದೆ. ಇದಲ್ಲದೇ ವಿಶ್ವವಿದ್ಯಾಲಯದಿಂದ ಬಿಡುಗಡೆಯಾದ ಮತ್ತು ಬಿಡುಗಡೆಯ ಹಂತದಲ್ಲಿರುವ ತಂತ್ರಜ್ಞಾನಗಳ ಬಗ್ಗೆ ರೈತರಿಗೆ ಕ್ಷೇತ್ರ ಪ್ರಯೋಗ ಹಾಗೂ ವಿವಿಧ ಪ್ರಾತ್ಯಕ್ಷಿಕೆಗಳ ಮೂಲಕ ಮನದಟ್ಟಾಗುವ ರೀತಿಯಲ್ಲಿ ನಿಯೋಜಿಸಲಾಗಿದೆ.

ಹೈಟೆಕ್‌ ಮಳಿಗೆಗಳು ಸಿದ್ಧ: ಕೃಷಿ ವಸ್ತು ಪ್ರದರ್ಶನದಲ್ಲಿ 184 ಹೈಟೆಕ್‌ ಮಳಿಗೆಗಳು, 364 ಸಾಮಾನ್ಯ ಮಳಿಗೆಗಳು, 21 ಯಂತ್ರೋಪಕರಣ ಮಳಿಗೆಗಳು, 27 ಆಹಾರ ಮಳಿಗೆಗಳು, 54 ಜಾನುವಾರು ಪ್ರದರ್ಶನ ಮಳಿಗೆಗಳು, 9 ಕ್ಷೇತ್ರ ಮಳಿಗೆಗಳ ವ್ಯವಸ್ಥೆ ಮಾಡಲಾಗಿದೆ. ರೈತರಿಗೆ ಕ್ಷೇತ್ರ ವೀಕ್ಷಣೆಗಾಗಿ ಕೃಷಿ ಮಹಾವಿದ್ಯಾಲಯ ಮುಖ್ಯ ಕಟ್ಟಡದಿಂದ ಪ್ರತಿ 15 ನಿಮಿಷಕ್ಕೆ ವಾಹನದ ವ್ಯವಸ್ಥೆ ಮಾಡಲಾಗಿದೆ. ಇದಲ್ಲದೇ ವಿಮಾ ವ್ಯಾಪ್ತಿಗೆ ಕೃಷಿ ಮೇಳದ ಆವರಣ ಒಳಪಡಿಸಲಾಗಿದ್ದು, ಸನ್ನದ್ಧ ಸ್ಥಿತಿಯಲ್ಲಿರುವ ಅಗ್ನಿಶಾಮಕ ವಾಹನ ಇರಲಿದೆ. ಮೊಬೈಲ್‌ ಎಟಿಎಂ ವಾಹನಗಳು, ಕ್ಷೇತ್ರ ಪ್ರಾತ್ಯಕ್ಷಿಕೆಗಳಿಗೆ ಭೇಟಿ, ಉಚಿತ ವೈದ್ಯಕೀಯ ಸಲಹಾ ಕೇಂದ್ರ, ಸಾರಿಗೆ ನಿರ್ವಹಣಾ ವ್ಯವಸ್ಥೆ, ಪೊಲೀಸ್‌ ಸಹಾಯ ಕೇಂದ್ರಗಳು ಇರಲಿವೆ.

ಮಳೆ ನೀರು ಕೊಯ್ಲು ಮತ್ತು ಅಂತರ್ಜಲ ಮರುಪೂರಣ, ಅಧಿಕ ಇಳುವರಿ ಮತ್ತು ನೀರಿನ ಉಳಿತಾಯಕ್ಕಾಗಿ ಸುಧಾರಿತ ನೀರಾವರಿ ಪದ್ಧತಿಗಳು, ಸಂಪನ್ಮೂಲ ಸಂರಕ್ಷಣೆಗಾಗಿ ಸಮಗ್ರ ಜಲಾನಯನ ಅಭಿವೃದ್ಧಿ, ಸಮಗ್ರ ಬೆಳೆ, ಪೋಷಕಾಂಶ, ಪೀಡೆಗಳ ನಿರ್ವಹಣೆ, ಕೃಷಿಯಲ್ಲಿ ಜೈವಿಕ ಹಾಗೂ ನ್ಯಾನೋ ತಂತ್ರಜ್ಞಾನಗಳ ಬಳಕೆ, ದ್ವಿದಳ ಧಾನ್ಯಗಳ ಉತ್ಪಾದನೆ, ಮೌಲ್ಯವರ್ಧನೆ, ಹೈಟೆಕ್‌ ತೋಟಗಾರಿಕೆ, ಮಣ್ಣು ರಹಿತ ಬೇಸಾಯ, ಸುಗಂಧ ಮತ್ತು ಔಷಧ ಬೆಳೆಗಳು, ಫಲ-ಪುಷ್ಪಗಳ ಪ್ರದರ್ಶನ, ಅಲಂಕಾರಿಕ ಮೀನು ಸಾಕಾಣಿಕೆ, ಮತ್ಸ್ಯ ಸಸ್ಯ ಸಂಗಮ, ಮೀನು ಮತ್ತು ಸಿಗಡಿ ಸಾಕಣೆ ಹಾಗೂ ಅಲಂಕಾರಿಕ ಮೀನುಗಳ ಪ್ರದರ್ಶನ ಮೇಳದಲ್ಲಿ ಗಮನ ಸೆಳೆಯಲಿದೆ.

ಬೀಜದ ಜತೆಗೆ ಜೈವಿಕ ಗೊಬ್ಬರ:ಮೇಳದಲ್ಲಿ 333 ಕ್ವಿಂಟಲ್‌ ಹಿಂಗಾರಿ ಜೋಳ, 344 ಕ್ವಿಂಟಲ್‌ ಗೋಧಿ, 1445 ಕ್ವಿಂಟಲ್‌ ಕಡಲೆ, 39 ಕ್ವಿಂಟಲ್‌ ಕುಸುಬೆ ಮತ್ತು 1 ಕ್ವಿಂಟಲ್‌ ಸಾಸಿವೆ ಒಟ್ಟು 2161 ಕ್ವಿಂಟಲ್‌ ಬೀಜ ಪ್ರಸಕ್ತ ಕೃಷಿ ಮೇಳದಲ್ಲಿ ಮಾರಾಟಕ್ಕೆ ಲಭ್ಯವಿದೆ. ಇದಲ್ಲದೇ ವಿಶ್ವವಿದ್ಯಾಲಯಕ್ಕೆ ಪ್ರಪ್ರಥಮ ಬಾರಿಗೆ ಜೈವಿಕ ಕೃಷಿ ಪರಿಕರಗಳ ಉತ್ಪನ್ನ ಹಾಗೂ ಮಾರಾಟಕ್ಕೆ ಪರವಾನಗಿ ಪತ್ರ ದೊರೆತಿದೆ. ಈ ಹಿನ್ನೆಲೆಯಲ್ಲಿ 847 ಕೆಜಿ ವಿವಿಧ ಪ್ರಕಾರದ ಜೈವಿಕ ಗೊಬ್ಬರಗಳ ಪುಡಿ, 410 ಲೀಟರ್‌ ವಿವಿಧ ಪ್ರಕಾರದ ಜೈವಿಕ ಗೊಬ್ಬರದ ದ್ರವಗಳು ಪ್ರಸಕ್ತ ಕೃಷಿ ಮೇಳದಲ್ಲಿ ಮಾರಾಟಕ್ಕೆ ಲಭ್ಯವಿದೆ.


Spread the love

About Laxminews 24x7

Check Also

ಸಿಎಂ ಫೋನ್ ಮಾಡಿ ಸಮಾಧಾನಪಡಿಸಿದ ಬಳಿಕ ಕರ್ತವ್ಯಕ್ಕೆ ಹಾಜರಾದ ASP ಭರಮನಿ

Spread the loveಧಾರವಾಡ/ಬೆಂಗಳೂರು: ಸ್ವಯಂ ನಿವೃತ್ತಿಗೆ ಕೋರಿಕೆ ಸಲ್ಲಿಸಿದ್ದ ಧಾರವಾಡ ಹೆಚ್ಚುವರಿ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಎನ್‌.ವಿ.ಭರಮನಿ ಅವರು ಸಿಎಂ ಸಮಾಧಾನಪಡಿಸಿದ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ