ಬೆಳಗಾವಿ: ಕಳೆದ ಮೂರು ದಿನಗಳಿಂದ ಗಡಿ ಜಿಲ್ಲೆ ಬೆಳಗಾವಿ ಸೇರಿ ಪಶ್ಚಿಮಘಟ್ಟ ಪ್ರದೇಶದಲ್ಲಿ ನಿರಂತರ ಮಳೆಗೆ ಕುಂದಾನಗರಿ ಜನರ ಜೀವನ ಸಂಪೂರ್ಣ ಅಸ್ತವ್ಯಸ್ತಗೊಂಡಿದೆ.
ಪ್ರಾಣಹಾನಿ ಮತ್ತು ಆಸ್ತಿಪಾಸ್ತಿಗಳಿಗೆ ಹಾನಿಯುಂಟಾಗಿದ್ದು, 17ಸೇತುವೆಗಳು ಮುಳುಗಡೆಯಾಗಿದ್ದಲ್ಲದೇ 36 ಮನೆಗಳ ನೆಲಸಮವಾಗಿವೆ.
ಪಶ್ಚಿಮಘಟ್ಟ ಪ್ರದೇಶ ಸೇರಿ ಬೆಳಗಾವಿ ಜಿಲ್ಲೆ ಸೇರಿ ಜಿಲ್ಲಾದ್ಯಂತ ಶನಿವಾರ ಸಂಜೆಯಿಂದಲೇ ಸುರಿಯುತ್ತಿರುವ ಮಳೆಗೆ ಘಟಪ್ರಭಾ, ಮಲಪ್ರಭಾ ಹಾಗೂ ಹಿರಣ್ಯಕೇಶಿ ನದಿಗಳಲ್ಲಿ ನೀರಿನ ಒಳಹರಿವು ಹೆಚ್ಚಳವಾಗಿದೆ. ಘಟಪ್ರಬಾ ನದಿಯಲ್ಲಿ ಭಾನುವಾರ ಸಂಜೆಯ ವೇಳೆಗೆ ನೀರಿನ ಹರಿವು 28 ಸಾವಿರ ಕ್ಯೂಸೆಕ್ ನಷ್ಟಿತ್ತು. ಸದ್ಯ ರಾಜಾ ಲಖಮಗೌಡ ಜಲಾಶಯದಿಂದ 28ಸಾವಿರ ಕ್ಯೂಸೆಕ್ ಹೆಚ್ಚುವರಿ ನೀರನ್ನು ಹೊರಬಿಡಲಾಗಿದೆ.
ಇದರ ಜತೆಗೆ ಬಳ್ಳಾರಿ ನಾಲಾ, ಹಿರಣ್ಯಕೇಶಿ ನದಿ ಸೇರಿ ಒಟ್ಟು 37ಸಾವಿರ ಕ್ಯೂಸೆಕ್ ನೀರನ್ನು ಘಟಪ್ರಭಾ ನದಿಗೆ ಬಿಡಲಾಗುತ್ತಿದೆ. ಗೋಕಾಕ್ ಮತ್ತು ಮೂಡಲಗಿ ತಾಲೂಕಿನ ನದಿ ಪಾತ್ರದ ಗ್ರಾಮಗಳಲ್ಲಿ ಮತ್ತೆ ಪ್ರವಾಹದ ಭೀತಿ ಎದುರಾಗಿದೆ.
ಮಲಪ್ರಭಾ ನದಿಗೂ ಹೆಚ್ಚಿದ ಒಳಹರಿವು: ಪಶ್ಚಿಮ ಘಟಗಳು, ಕಣಕುಂಬಿ ಹಾಗೂ ಖಾನಾಪುರ ಭಾಗದಲ್ಲಿ ಅಧಿಕ ಮಳೆ ಸುರಿಯುತ್ತಿರುವ ಪರಿಣಾಮವಾಗಿ ಮಲಪ್ರಭಾ ನದಿಗೆ ನೀರಿನ ಒಳಹರಿವು ಹೆಚ್ಚಾಗಿದೆ. ನದಿಗೆ ಬಿಡುತ್ತಿರುವ ನೀರನ್ನು 1,500 ಕ್ಯೂಸೆಕ್ ನಿಂದ 4,000 ಕ್ಯೂಸೆಕ್ಗೆ ಹೆಚ್ಚಿಸಲಾಗಿದೆ. ಅಲ್ಲದೇ ನೀರಿನ ಒಳಹರಿವಿನ ಅನುಗುಣವಾಗಿ ಹೊರಹರಿವು ಕೂಡಾ ಹೆಚ್ಚಿಸುವುದಾಗಿ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಇದರಿಂದ ಕಳೆದ ಎರಡು ದಿನಗಳಿಂದ ಸಂಪರ್ಕ ಪ್ರಾರಂಭವಾಗಿದ್ದ, ರಾಮದುರ್ಗ ನಗರದ ಹಳೆ ಸೇತುವೆಯು ಮತ್ತೆ ಮುಳುಗಡೆಯ ಭೀತಿ ಹೊಂದಿದೆ. ಇದರಿಂದ ಸುರೇಬಾನ, ದೊಡಮಂಗಡಿ ಗ್ರಾಮಗಳಲ್ಲಿ ಸಂಪರ್ಕ ಕಡಿತಗೊಳ್ಳುವ ಸಾಧ್ಯತೆ ಹೆಚ್ಚಾಗಿದೆ.
ಜಿಲ್ಲಾಡಳಿತದಿಂದ ಮುನ್ನಚ್ಚರಿಕೆ ಆದೇಶ: ಪಶ್ಚಿಮ ಘಟಗಳು, ಜಿಲ್ಲಾದ್ಯಂತ ಸುರಿಯುತ್ತಿರುವ ಧಾರಾಕಾರ ಮಳೆಯಿಂದಾಗಿ ಜಿಲ್ಲೆಯ ಜಲಾಶಯಗಳು ಶೇ.100ರಷ್ಟು ಭರ್ತಿಯಾಗಿವೆ. ಜಲಾಶಯಕ್ಕೆ ಒಳಹರಿವಿನ ಪ್ರಮಾಣವು ಅಧಿಕವಾಗಿದೆ. ಒಳಹರಿವಿನ ಪ್ರಮಾಣ ಹೆಚ್ಚಾದಂತೆ ಜಲಾಶಯದಿಂದ ನದಿಗೆ ಯಾವುದೇ ಕ್ಷಣದಲ್ಲಾದರೂ ನೀರು ಬಿಡಬಹುದು. ಘಟಪ್ರಭಾ ಹಾಗೂ ಹಿರಣ್ಯಕೇಶಿ ನದಿ ಪಾತ್ರದ ಗ್ರಾಮದ ಜನರು ತಮ್ಮ ಜಾರುವಾರುಗಳ ಸಮೇತವಾಗಿ ಸುರಕ್ಷಿತ ಪ್ರದೇಶಗಳಿಗೆ ತೆರಳುವಂತೆ ಮುನ್ನಚ್ಚರಿಕೆ ಆದೇಶ ಹೊರಡಿಸಲಾಗಿದೆ.
17 ಸೇತುವೆ ಜಲಾವೃತ ರಸ್ತೆ ಸಂಪರ್ಕ ಕಡಿತ: ಕೃಷ್ಣಾ, ವೇದಗಂಗಾ, ದೂದಗಂಗಾ ಹಾಗೂ ಹಿರಣ್ಯಕೇಶಿ ನದಿ ನೀರಿನ ಮಟ್ಟ ಹೆಚ್ಚಳವಾಗಿದೆ. ಜಿಲ್ಲೆಯ ನಿಪ್ಪಾಣಿ ತಾಲೂಕಿನ ವೇದಗಂಗಾ ನದಿಯ ಜತ್ರಾಟ್ – ಭೀವಶಿ, ಅಕ್ಕೋಳ-ಸಿದ್ನಾಳ, ಸಿದ್ನಾಳ-ಹುಣ್ಣರಗಿ ಗ್ರಾಮದ ಸಂಪರ್ಕ ಸೇತುವೆಗಳು ಮುಳಗುಡೆಗೊಂಡಿವೆ. ಅಲ್ಲದೇ ನಾಲಾ ನೀರಿನಿಂದಾಗಿ ನಿಪ್ಪಾಣಿ ತಾಲೂಕಿನ ಲಖನಾಪುರ ಗ್ರಾಮಕ್ಕೆ ಸಂಪರ್ಕಿಸುವ ಸೇತುವೆ ಕೂಡಾ ಮುಳುಗಡೆಯಾಗಿದೆ.
ಹುಕ್ಕೇರಿ ತಾಲೂಕಿನ ಹಿರಣ್ಯಕೇಶಿ ನದಿಯ ನೀರಿನಿಂದಾಗಿ ಹುಕ್ಕೇರಿ-ಯರನಾಳ ಗ್ರಾಮದ ಸೇತುವೆ ಮುಳುಗಡೆಯಾಗಿದೆ. ಸೇತುವೆಗಳು ಮುಳುಗಡೆಯಾದ ಹಿನ್ನೆಲೆಯಲ್ಲಿ ಪರ್ಯಾಯ ಮಾರ್ಗದಲ್ಲಿ ಜನರು ಸಂಚರಿಸುವ ಅನಿವಾರ್ಯತೆ ಎದುರಾಗಿದೆ. ಇದಲ್ಲದೇ ಗೋಕಾಕ ತಾಲೂಕಿನಲ್ಲಿ 04ಸೇತುವೆಗಳು ಸೇರಿ ಒಟ್ಟು 17 ಕೆಳಹಂತದ ಸೇತುವೆಗಳು ಜಲಾವೃತವಾಗಿವೆ.
ಬೆಳಗಾವಿ ಜಿಲ್ಲೆಯಲ್ಲಿ 35ಕ್ಕೂ ಅಧಿಕ ಮನೆಗಳ ಕುಸಿತ: ಕಳೆದ ಮೂರು ದಿನಗಳಿಂದ ಗಡಿಜಿಲ್ಲೆ ಬೆಳಗಾವಿಯಲ್ಲಿ ಸುರಿಯುತ್ತಿರುವ ಧಾರಾಕಾರ ಮಳೆಗೆ ಮೂರೇ ದಿನಗಳ ಅವಧಿಯಲ್ಲಿ 35ಕ್ಕೂ ಅಧಿಕ ಮನೆಗಳ ಕುಸಿತವಾಗಿವೆ. ಅದರಲ್ಲಿ ಪ್ರಮುಖವಾಗಿ ಬೈಲಹೊಂಗಲ, ಸವದತ್ತಿ, ಚಿಕ್ಕೋಡಿ, ಬೆಳಗಾವಿಯಲ್ಲಿ 16ಮನೆಗಳ ಕುಸಿತವಾಗಿದ್ದು ನಿಪ್ಪಾಣಿ ತಾಲೂಕಿನಲ್ಲಿ ಮಳೆಯಿಂದ 19ಮನೆಗಳು ಕುಸಿತವಾಗಿವೆ. ಮತ್ತೆ ಪ್ರವಾಹದ ಆತಂಕ ಎದುರಾಗಿದೆ.
Laxmi News 24×7