ಚಿತ್ರದುರ್ಗ: ಮುರುಘಾ ಮಠದ ಪೀಠಾಧಿಪತಿ ಡಾ.ಶಿವಮೂರ್ತಿ ಮುರುಘಾ ಶರಣರಿಗೆ ಹೃದಯ ಚಿಕಿತ್ಸೆ ಅಗತ್ಯವಿದೆ ಎಂಬ ಅರ್ಜಿಗೆ ಸ್ಪಂದಿಸಿರುವ ಎರಡನೇ ಹೆಚ್ಚುವರಿ ಜಿಲ್ಲಾ ನ್ಯಾಯಾಧೀಶೆ ಬಿ.ಕೆ.ಕೋಮಲಾ, ಶ್ರೀಗಳನ್ನು ಅತ್ಯುತ್ತಮ ಆಸ್ಪತ್ರೆಗೆ ಸ್ಥಳಾಂತರಿಸುವ ಮುನ್ನ ಸಮೀಪದ ಸರ್ಕಾರಿ ಆಸ್ಪತ್ರೆಗಳಲ್ಲಿ ಲಭ್ಯವಿರುವ ಉತ್ತಮ ಚಿಕಿತ್ಸೆ ಕುರಿತು ವರದಿ ಪಡೆಯುವಂತೆ ಜೈಲು ಅಧೀಕ್ಷಕರಿಗೆ ಬುಧವಾರ ಸೂಚಿಸಿದರು.
ಶ್ರೀಗಳ ಪರ ವಕೀಲರು ಸಲ್ಲಿಸಿದ್ದ ಅರ್ಜಿಯನ್ನು ಆಲಿಸಿದ ನ್ಯಾಯಾಧೀಶರು, ರೋಗಿಯ ಪ್ರಾಥಮಿಕ ತಪಾಸಣೆಯನ್ನು ಹತ್ತಿರದ ಸರ್ಕಾರಿ ಆಸ್ಪತ್ರೆಯಲ್ಲಿ ನಡೆಸಿ, ಆ ವರದಿಯನ್ನು ನ್ಯಾಯಾಲಯಕ್ಕೆ ಸಲ್ಲಿಸಿದ ನಂತರ ತೀರ್ಮಾನ ಕೈಗೊಳ್ಳಬಹುದು ಎಂದು ಸಲಹೆ ನೀಡಿದರು.
ಶ್ರೀಗಳ ಜಾಮೀನು ಅರ್ಜಿಗೆ ಸಂಬಂಧಿಸಿದಂತೆ, ತಮ್ಮ ಆಕ್ಷೇಪಣೆಗಳನ್ನು ಸಲ್ಲಿಸಲು ಸಂತ್ರಸ್ತರಿಗೆ ಮತ್ತು ವಿಶೇಷ ಸರ್ಕಾರಿ ಅಭಿಯೋಜಕಿ ನಾಗವೇಣಿ ಅವರಿಗೆ ನೋಟಿಸ್ ಜಾರಿಗೊಳಿಸಲಾಗಿದೆ. ಖಾಸಗಿ ವಕೀಲ ಶ್ರೀನಿವಾಸ್ ವಿಶೇಷ ಸರ್ಕಾರಿ ಅಭಿಯೋಜಕರನ್ನು ಬೆಂಬಲಿಸಲು ಅರ್ಜಿ ಸಲ್ಲಿಸಿದ್ದಾರೆ.