ಬೆಂಗಳೂರು: ಸ್ನೇಹಿತನಿಗೆ ಕತ್ತರಿಯಿಂದ ಹೊಟ್ಟೆಗೆ ಚುಚ್ಚಿ ನಂತರ ಹೆದರಿಕೆಯಿಂದ ಎರಡನೇ ಮಹಡಿಯ ಬಾಲ್ಕನಿಯ ಕಿಟಕಿಯಿಂದ ಹಾರಿ ಗಾಯಗೊಂಡಿರುವ ಘಟನೆ ಬೇಗೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಿನ್ನೆ ರಾತ್ರಿ ನಡೆದಿರುವುದು ಬೆಳಕಿಗೆ ಬಂದಿದೆ.
ನಾಗಾಲ್ಯಾಂಡ್ ಮೂಲದ ಹೇಕಾ ಹಲ್ಲೆಗೊಳಗಾದ ಯುವಕ. ಅವರ ರೂಮ್ ಮೇಟ್ ಆಗಿರುವ ರೋಹಿತ್ ಹಲ್ಲೆ ನಡೆಸಿ ಬಳಿಕ ಭಯದಿಂದ ಮೂರನೇ ಮಹಡಿಯಿಂದ ಬಿದ್ದು ಗಾಯಗೊಂಡು ಆಸ್ಪತ್ರೆ ಸೇರಿದ್ದಾರೆ. ರೋಹಿತ್ ಹಾಗೂ ಹೇಕಾ ಸೇರಿದಂತೆ ಐವರು ಸ್ನೇಹಿತರು ಒಂದೇ ಅಪಾರ್ಟ್ಮೆಂಟ್ನಲ್ಲಿ ವಾಸವಾಗಿದ್ದರು. ಇವರೆಲ್ಲರೂ ಕೋರಮಂಗಲದ ರೆಸ್ಟೋರೆಂಟ್ ವೊಂದರಲ್ಲಿ ಕೆಲಸ ಮಾಡುತ್ತಿದ್ದರು.
ನಿನ್ನೆ ರಾತ್ರಿ ಐವರು ಕುಡಿದು ಪಾರ್ಟಿ ಮಾಡಿದ್ದಾರೆ. ಕುಡಿದ ಆಮಲಿನಲ್ಲಿ ಕ್ಷುಲ್ಲಕ ಕಾರಣಕ್ಕಾಗಿ ರೋಹಿತ್ ಹಾಗೂ ಹೇಕಾ ನಡುವೆ ಮಾತಿನ ವಾಗ್ವಾದ ನಡೆದಿದ್ದು, ಜಗಳ ತಾರಕಕ್ಕೇರಿದೆ. ಈ ವೇಳೆ ರೋಹಿತ್, ಮೀಸೆ ಕಟ್ ಮಾಡುವ ಕತ್ತರಿಯಿಂದ ಹೇಕಾ ಪಕ್ಕೆಲುಬಿಗೆ ಚುಚ್ಚಿ ಹಲ್ಲೆ ನಡೆಸಿದ್ದಾರೆ.